• 15 December 2018 21:32
Jai Kannada
Jai Kannada
Blog single photo
January 14, 2018

ಭುವನೇಶ್ವರ್ ಡ್ರಾಪ್ ಮಾಡಿ ಇಶಾಂತ್ ಅವರನ್ನು ತಂದಿದ್ದೇಕೆ? 

ನವದೆಹಲಿ: ದಕ್ಷಿಣ ಆಫ್ರಿಕಾದ ವಿರುದ್ಧ ಎರಡನೇ ಟೆಸ್ಟ್‌ಗೆ ಟೀಂ ಇಂಡಿಯಾದಲ್ಲಿ ಮಾಡಿರುವ ಕೆಲವು ಬದಲಾವಣೆಗಳು ಕೆಲವು ಹಿರಿಯ ಆಟಗಾರರ ಕಣ್ಣು ಕೆಂಪಾಗಿಸಿದೆ. 

ರೋಹಿತ್ ಶರ್ಮಾ ಅವರ ಪ್ರಸ್ತುತ ಫಾರಂ ಗಮನದಲ್ಲಿಟ್ಟುಕೊಂಡು ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಆಡಿಸದೇ ಶರ್ಮಾರನ್ನು ಆಡಿಸಲಾಗಿದೆ. ಆದರೆ ಅದೇ ಮಾನದಂಡವನ್ನು ಭುವನೇಶ್ವರ್ ಕುಮಾರ್ ವಿಷಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಅನುಸರಿಸಲಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

ಭುವನೇಶ್ವರ್ ಕುಮಾರ್ ಅವರಿಗೆ ಬದಲಿಯಾಗಿ ಇಶಾಂತ್ ಶರ್ಮಾರನ್ನು ಆಡಿಸಿದ್ದು, ಕೆಲವರಿಗೆ ಅಚ್ಚರಿ ಮೂಡಿಸಿದೆ. ಇನ್ನೂ ಕೆಲವರಿಗೆ ಕೋಪ ಬರಿಸಿದೆ. 11 ಮಂದಿ ಆಟಗಾರರ ತಂಡದಲ್ಲಿ ಭಾರತ ಮೂರು ಬದಲಾವಣೆಗಳನ್ನು ಮಾಡಿದೆ.
 ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಗಾಯವಾಗಿದ್ದು, ಅವರ ಬದಲಿಗೆ ಪಾರ್ಥಿವ್ ಪಟೇಲ್ ವಿಕೆಟ್ ಕೀಪರ್ ಸ್ಥಾನ ಪಡೆದುಕೊಂಡಿದ್ದಾರೆ.
ಶಿಖರ್ ಧವನ್ ಮೊದಲ ಟೆಸ್ಟ್‌ನಲ್ಲಿ 16, 16 ಸ್ಕೋರ್ ಮಾಡಿದ್ದು ಫಾರಂ ಕಳೆದುಕೊಂಡಿದ್ದರಿಂದ ಕೆ.ಎಲ್. ರಾಹುಲ್‌ಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ ಭುವನೇಶ್ವರ ಕುಮಾರ್ ಫಾರಂನಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 87ಕ್ಕೆ 4 ಮತ್ತು 33ಕ್ಕೆ 2 ವಿಕೆಟ್ ಕಬಳಿಸಿ ಅಗ್ರಮಾನ್ಯ ಬೌಲರ್ ಎನಿಸಿದ್ದರು. ಆದರೂ ಸಹ ಎರಡನೇ ಟೆಸ್ಟ್‌ನಲ್ಲಿ ಅವರಿಗೆ ಅವಕಾಶ ನೀಡದೇ ಇಶಾಂತ್ ಶರ್ಮಾ ಅವರಿಗೆ ಸ್ಥಾನ ನೀಡಿದ್ದೇಕೆ? ಇಶಾಂತ್ ಶರ್ಮಾ ಅವರ ಎತ್ತರದಿಂದಾಗಿ ಬೌನ್ಸ್ ಎಸೆತಗಳನ್ನು ಎಸೆಯುತ್ತಾರೆಂಬ ಕಾರಣದಿಂದಾಗಿಯೇ,

ಆದರೆ ದ.ಆಫ್ರಿಕನ್ನರು ಬೌನ್ಸ್ ಎಸೆತಗಳನ್ನು ಆಡಿಕೊಂಡೇ ಬೆಳೆದವರು. ಅದೇನೂ ಅವರಿಗೆ ಹೊಸತಲ್ಲ. ಭುವನೇಶ್ವರ್ ಅವರ ಸ್ವಿಂಗ್ ಬೌಲಿಂಗ್ ಸಮರ್ಥ ಅಸ್ತ್ರ ಎನ್ನುವುದು ಮೊದಲ ಟೆಸ್ಟ್‌ನಲ್ಲೇ ಸಾಬೀತಾಗಿದೆ. ಆದರೆ ಭುವನೇಶ್ವರ್‌ಗೆ ಬದಲಿಯಾಗಿ ಇಶಾಂತ್ ಅವರನ್ನು ತಂದಿದ್ದೇಕೆಂದು ಕ್ರಿಕೆಟ್ ತಜ್ಞರು ಪ್ರಶ್ನಿಸಿದ್ದಾರೆ.

ಶಮಿ ಅಥವಾ ಬುಮ್ರಾರನ್ನು ಬದಲಿಸಿ ಇಶಾಂತ್‌ರನ್ನು ತರಬಹುದಿತ್ತಲ್ಲಾ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಒಟ್ಟಿನಲ್ಲಿ ಎರಡನೇ ಟೆಸ್ಟ್‌ನಲ್ಲಿ ಇಶಾಂತ್ ಬೌಲಿಂಗ್ ಮೊನಚು ಹೇಗಿರುತ್ತದೆಂದು ಕಾದು ನೋಡಬೇಕು.
 

Recent Comments

Leave Comments

footer
Top