ಉಡುಪಿ: ತುರ್ತು ಚಿಕಿತ್ಸೆ ಅಗತ್ಯವಾದ ರೋಗಿಯನ್ನು ಕರೆದೊಯುತ್ತಿದ್ದ 108 ಆರೋಗ್ಯ ಕವಚ ಆ್ಯಂಬುಲೆನ್ಸ್ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕೆಟ್ಟು ನಿಂತಾಗ ರೋಗಿಯ ಪರಿಸ್ಥಿತಿ ಏನಾಗಬಹುದು? ನಿನ್ನೆ ಆಗಿದ್ದು ಇದೇ ರೀತಿಯ ಘಟನೆ. ನಗರದ ಜಂಕ್ಷನ್ ಸ್ಥಳದಲ್ಲಿ ಹೃದಯ ಬೇನೆಯಿಂದ ಗಂಭೀರವಾಗಿ ರೋಗಗ್ರಸ್ಥರಾಗಿದ್ದ ವ್ಯಕ್ತಿಯನ್ನು 108 ಆಂಬ್ಯುಲೆನ್ಸ್ನಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಇದ್ದಕ್ಕಿದ್ದಂತೆ ಕಲ್ಸಾಂಕಾ ಜಂಕ್ಷನ್ ಬಳಿ ಕೆಟ್ಟು ನಿಂತಿತು.
ಎಂಜಿನ್ ಚಾಲನೆಗೆ ಚಾಲಕ ಪುನಃ ಪುನಃ ಪ್ರಯತ್ನಿಸಿದರೂ ಫಲ ನೀಡಲಿಲ್ಲ.ಚಾಲಕ ಅಸಹಾಯಕನಾಗಿ ಗೊಂದಲದ ಸ್ಥಿತಿಗೆ ಒಳಗಾದ. ಆಂಬ್ಯುಲೆನ್ಸ್ನಲ್ಲಿ ಕುಳಿತಿದ್ದ ಸಂಬಂಧಿಗಳು ಗಟ್ಟಿ ಧ್ವನಿಯಲ್ಲಿ ಅಳಲಾರಂಭಿಸಿದರು
ಆಗ ಇಬ್ಬರು ಟ್ರಾಫಿಕ್ ಪೊಲೀಸರು ದೈಹಿಕ ಬಲ ಪ್ರಯೋಗಿಸಿ ಆಂಬ್ಯುಲೆನ್ಸ್ ತಳ್ಳಿದರು. ಸ್ಥಳೀಯರು ಅದನ್ನು ಕಂಡು ಅವರು ಕೂಡ ವಾಹನ ತಳ್ಳುವುದಕ್ಕೆ ಕೈಗೂಡಿಸಿದ ತರುವಾಯ ಎಂಜಿನ್ ಚಾಲನೆಯಾಯಿತು.
ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ನಿಲ್ಲುವ ಇದೇ ಆಂಬ್ಯುಲೆನ್ಸ್ ತನ್ನ ಪ್ರಯಾಣದ ಮಧ್ಯದಾರಿಯಲ್ಲೇ ಕೆಲವು ವಾರಗಳ ಹಿಂದೆ ಉಡುಪಿಯಿಂದ ಮಂಗಳೂರಿಗೆ ರೋಗಿಯನ್ನು ಸಾಗಿಸುವಾಗ ಕೆಟ್ಟು ನಿಂತಿತ್ತು.
Recent Comments