• 19 August 2018 23:09
Jai Kannada
Jai Kannada
Blog single photo
April 26, 2018

ಮೋದಿ ಮೋಡಿಯಿಂದ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವುದೇ?

ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇದಿಕೆ ಸಜ್ಜಾಗಿದೆ.  ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪ್ರಮುಖ ಪಕ್ಷಗಳಾಗಿ ಅಧಿಕಾರದ ಗದ್ದುಗೆ ಹಿಡಿಯಲು ರಣಕಹಳೆ ಮೊಳಗಿಸುತ್ತಿವೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದು ಅಷ್ಟೊಂದು ಸುಲಭದ ಮಾತಲ್ಲ.

ಹೀಗಾಗಿ ಜೆಡಿಎಸ್ ಸದಾ ಕಿಂಗ್ ಮೇಕರ್ ಪಾತ್ರವನ್ನು ವಹಿಸಿಕೊಂಡು ಅಧಿಕಾರದಲ್ಲಿ ತನಗೆ ಪಾಲು ಸಿಗುವುದೆಂಬ ಹಂಬಲದೊಂದಿಗೆ ಮನಸ್ಸಿನಲ್ಲೇ ಖುಷಿ ಅನುಭವಿಸುತ್ತಿದೆ. ಇದಕ್ಕೆ ಕಾರಣವೂ ಇದೆ. ಏಕೆಂದರೆ ಇತ್ತೀಚಿನ  ಕೆಲವು ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಏಕೈಕ ಬಹುದೊಡ್ಡ ಪಕ್ಷವಾಗಿ ಹೊಮ್ಮುತ್ತದೆಂದು ಭವಿಷ್ಯ ನುಡಿದಿದ್ದರೆ, ಇನ್ನೂ ಕೆಲವು ಬಿಜೆಪಿ ದೊಡ್ಡ ಪಕ್ಷವಾಗಿ ಹೊಮ್ಮುತ್ತದೆಂದು ತಿಳಿಸಿದೆ. ಆದರೆ ಎರಡೂ ಪಕ್ಷಗಳಿಗೆ ಅಗತ್ಯ ಬಹುಮತ ಸಿಗುವುದಿಲ್ಲವೆಂದೂ ತಿಳಿಸಿದೆ.

ಇದರಿಂದ ಜೆಡಿಎಸ್ ಕಿಂಗ್ ಮೇಕರ್ ಪಾತ್ರವನ್ನು ವಹಿಸಲೇಬೇಕಾಗುತ್ತದೆ. ಕಿಂಗ್ ಮೇಕರ್ ಪಾತ್ರ ವಹಿಸಿ ಅಧಿಕಾರದಲ್ಲಿ ಜೆಡಿಎಸ್ ಪಾಲು ತೆಗೆದುಕೊಳ್ಳುತ್ತದೆ. ಆದರೆ ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಬದ್ಧವೈರಿಗಳಂತೆ ಚುನಾವಣೆ ಕಣದಲ್ಲಿ ವರ್ತಿಸುತ್ತಿರುವುದರಿಂದ ಜೆಡಿಎಸ್ ಒಲವು ಪುನಃ ಬಿಜೆಪಿ ಕಡೆಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಜೆಪಿ ಹಿಂದಿನ ಕಹಿ ಘಟನೆಯನ್ನು ಮರೆತು ಜೆಡಿಎಸ್‌ಗೆ ರತ್ನಗಂಬಳಿ ಹಾಸಿ ಸರ್ಕಾರದಲ್ಲಿ ಭಾಗಿಯಾಗಿಸುವುದರಲ್ಲಿ ಅನುಮಾನವಿಲ್ಲ.

ಆದರೆ ಕಾಂಗ್ರೆಸ್ ಮಾತ್ರ ಈಗ ಅಡ್ಡಕತ್ತರಿಯಲ್ಲಿ ಸಿಕ್ಕಿಬಿದ್ದಂತಾಗಿದೆ.  ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ ಜನ್ಮಜನ್ಮಕ್ಕೂ ಸಾಧ್ಯವಿಲ್ಲ. ಏಕೆಂದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯ. ಹೀಗಾಗಿ ಚುನಾವಣೆ ಪೂರ್ವ ಸಮೀಕ್ಷೆಗಳನ್ನು ನಿಜವೆಂದು ಭಾವಿಸಿದ ಪಕ್ಷದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಮತ್ತೆ ಅಧಿಕಾರದ ಗದ್ದುಗೆ ಏರುತ್ತದೆಂದು ಖಡಾಖಂಡಿತವಾಗಿ ಹೇಳಬಹುದು.

ಪ್ರಚಾರಕ್ಕೆ ಇನ್ನುಳಿದಿರುವುದು ಕೇವಲ 10-12 ದಿವಸಗಳು. ಅಷ್ಟರಲ್ಲಿ ಮೋದಿ ಕರ್ನಾಟಕಕ್ಕೆ ಕಾಲಿಟ್ಟು ತಮ್ಮ ಅದ್ಭುತ ಪ್ರಚಾರದ ಮೂಲಕ ಏನಾದರೂ ಪವಾಡ ಮಾಡಿದರೆ ಯಾರ ಹಂಗೂ ಇಲ್ಲದೇ ಬಿಜೆಪಿ ಬಹುಮತ ಸಾಧಿಸಬಹುದು. ಕಾಂಗ್ರೆಸ್ ಪಕ್ಷಕ್ಕೂ ಕೂಡ ಇದೇ ರೀತಿಯ ಅವಕಾಶವಿದ್ದು, ಯಾವುದೇ ಪಕ್ಷವು ಬಹುಮತದ ಗಡಿ ದಾಟಲು ದೊಡ್ಡ ಪವಾಡವೇ ನಡೆಯಬೇಕಾಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಎಂದು ಹೇಳಿರುವುದರಿಂದ ಚುನಾವಣೆ ಪೂರ್ವ ಸಮೀಕ್ಷೆಗಳನ್ನು ಅಷ್ಟು ಸುಲಭವಾಗಿ ಕಡೆಗಣಿಸಲು ಸಾಧ್ಯವೇ ಇಲ್ಲ. 

ಆದರೆ ಸಮ್ಮಿಶ್ರ ಸರ್ಕಾರದ ಇತಿ-ಮಿತಿಗಳು ಎಲ್ಲರಿಗೂ ಗೊತ್ತೇ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರ ಯಾವುದೇ ಪಕ್ಷಕ್ಕೆ ಇರುವುದಿಲ್ಲ. ಪರಸ್ಪರ ಹೊಂದಾಣಿಕೆ ಮಾಡಿಕೊಂಡು 5 ವರ್ಷಗಳ ಕಾಲ ತಳ್ಳುವುದು ಸುಲಭದ ಮಾತಲ್ಲ. ಅಷ್ಟರಲ್ಲಿ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯದಿಂದ ಸರ್ಕಾರ ಬಿದ್ದು ಹೋಗುವ ಸಾಧ್ಯತೆಯೂ ಇರುತ್ತದೆ. 

Recent Comments

Leave Comments

footer
Top