• 19 April 2019 20:38
Jai Kannada
Jai Kannada
Blog single photo
December 06, 2017

ವಾಯು ಮಾಲಿನ್ಯ ಮಾರಣಾಂತಿಕ ವಿಷ

ನಮ್ಮ ಮಗನಿಗೆ ಧೂಮಪಾನ, ಮದ್ಯಪಾನ ಯಾವುದೇ ಚಟವಿಲ್ಲ. ಆದರೂ ಶ್ವಾಸಕೋಶದ ಕಾಯಿಲೆ ಬಂದಿದೆ. ಎಲ್ಲಿಂದ ಬಂತೋ ದೇವರಿಗೇ ಗೊತ್ತು ಎಂದು ಯುವಕನ ತಂದೆ, ತಾಯಿ ಆಸ್ಪತ್ರೆಯಲ್ಲಿ ಚಿಂತಿಸುತ್ತಿದ್ದ ದೃಶ್ಯ ಕಂಡುಬಂತು. ಮನುಷ್ಯನ ದೇಹದಲ್ಲಿ ಕಾಯಿಲೆ ಬರುವುದು ದುಶ್ಚಟಗಳಿಂದ ಮಾತ್ರವಲ್ಲ. ವಾಯುಮಾಲಿನ್ಯ, ಆಹಾರದಲ್ಲಿ ಸೂಕ್ತ ಪೌಷ್ಠಿಕಾಂಶಗಳ ಕೊರತೆ, ಜಲಮಾಲಿನ್ಯ ಹೀಗೆ ನಾನಾ ಕಾರಣಗಳಿರುತ್ತವೆ. ಅವುಗಳಲ್ಲಿ ವಾಯು ಮಾಲಿನ್ಯ ನಮ್ಮ ದೇಶದಲ್ಲಿ ಸಾವಿರಾರು ಜನರನ್ನು ಬಾಧಿಸುತ್ತಿರುವ ಮಾರಣಾಂತಿಕ ವಿಷ.  ವಾಯು ಮಾಲಿನ್ಯದಿಂದ ಶ್ವಾಸಕೋಶ ಕಾಯಿಲೆ, ಉಬ್ಬಸ, ಹೃದ್ರೋಗ, ಪಾರ್ಶ್ವವಾಯು ಮುಂತಾದ ನಾನಾ ಕಾಯಿಲೆಗಳು ಅನೇಕ ಜನರನ್ನು
ಬಲಿತೆಗೆದುಕೊಳ್ಳುತ್ತಿದೆ.

 ಹೊಗೆಮಂಜು, ಧೂಳು ಮುಂತಾದ ಮಾಲಿನ್ಯಗಳಿಂದ ದೆಹಲಿ ಜಗತ್ತಿನಲ್ಲೇ ಅತ್ಯಂತ ಮಾಲಿನ್ಯಕರ ನಗರ ಎಂಬ ಕುಖ್ಯಾತಿ ಗಳಿಸಿರುವುದು ನಮಗೆ ತಿಳಿದಿದೆ. 

ಕಳೆದ ನವೆಂಬರ್ 8ರಂದು,ದೆಹಲಿಯಲ್ಲಿ ವಾಯುಮಾಲಿನ್ಯ ಅತ್ಯಧಿಕ ಮಟ್ಟವನ್ನು ಮುಟ್ಟಿ, ಕೆಲವು ವಾಯುಮಾಲಿನ್ಯ ನಿಗಾ ಕೇಂದ್ರಗಳು ವಾಯು ಗುಣಮಟ್ಟದ ಸೂಚ್ಯಂಕವನ್ನು
999 ಎಂದು ದಾಖಲಿಸಿತು.
ಯುನೈಟೆಡ್ ಏರ್‌ಲೈನ್ಸ್ ಕಳೆಪೆ ವಾಯು ಗುಣಮಟ್ಟದಿಂದಾಗಿ ಭಾರತದ ರಾಜಧಾನಿಗೆ ಫ್ಲೈಟ್ ರದ್ದು ಮಾಡಿತು. ಹೆದ್ದಾರಿಗಳಲ್ಲಿ ಕಾರುಗಳ ಚಾಲಕರಿಗೆ ರಸ್ತೆಯ ಮುಂದಿನ ದಾರಿ
ಕಾಣದೇ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತಗಳು ಸಂಭವಿಸಿದವು.  ರೈಲುಗಳ ಸಂಚಾರವನ್ನು ರದ್ದು ಮಾಡಲಾಯಿತು.

ವಾಯುಜನ್ಯ ಕಣಗಳು ಮತ್ತು ವಿಷಕಾರಿ ರಾಸಾಯನಿಕಗಳಿಂದ ಉಂಟಾಗುವ ಹೊಗೆಮಂಜು ಮೆಟ್ರೋಪಾಲಿಟನ್ ಪ್ರದೇಶದ 19 ದಶಲಕ್ಷ ಜನರನ್ನು ಬಾಧಿಸುತ್ತಿದೆ. ಕೇವಲ
ಗಾಳಿಯನ್ನು ಉಸಿರಾಡಿದರೆ ಕೂಡ ದಿನಕ್ಕೆ 50 ಸಿಗರೇಟು ಸೇದಿದಷ್ಟು ಹೊಗೆ  ದೇಹದೊಳಕ್ಕೆ ಸೇರುತ್ತದೆ. ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಹೆಚ್ಚು ರೋಗಿಗಳು ದಾಖಲಾದರು.
ವೈದ್ಯರು ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿಯನ್ನು ಘೋಷಿಸಿದರು.ದೆಹಲಿ ಮುಖ್ಯಮಂತ್ರಿ ಸ್ವತಃ ನಗರವನ್ನು ಗ್ಯಾಸ್ ಚೇಂಬರ್ ಎಂದು ಕರೆದರು. 

ದೆಹಲಿ ಅಷ್ಟೊಂದು ಮಾಲಿನ್ಯಕಾರಕವಾಗಿದ್ದು ಹೇಗೆ?  ಪಂಜಾಬ್, ಹರ್ಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ  ಬತ್ತದ ಬೆಳೆಯ ಕೊಯ್ಲಾದ ಮೇಲೆ ಉಳಿಯುವ ಪೈರಿನ
ಕೂಳೆಯನ್ನು ಜನರು ಸುಡುತ್ತಾರೆ. ಗೋದಿ ಬೆಳೆ ಬೆಳೆಯಲು ಮತ್ತು ಮಣ್ಣಿಗೆ ಪೌಷ್ಠಿಕಾಂಶ ಸೇರಿಸಲು ಜನರು ಈ ರೀತಿ ಮಾಡುತ್ತಿದ್ದರು. ದೆಹಲಿಯ ಹೊಗೆಮಂಜಿನ ವೈಶಿಷ್ಠ್ಯತೆ
ಏನೆಂದರೆ ನಗರದ ಹೊರಗೆ ಉರಿಯುವ ಹೊಗೆ ನಗರದ ಒಳಗಿನ ಮಾಲಿನ್ಯದ ಜತೆ ಸೇರುತ್ತಿರುವುದು. ಉದಾಹರಣೆಗೆ ನಿರ್ಮಾಣ ಕೆಲಸ, ವಾಹನಗಳ ಹೊಗೆ ಮತ್ತು ಸೌದೆ
ಒಲೆಯ ಹೊಗೆಗಳು. ಗ್ರಾಮೀಣ ಮತ್ತು ನಗರ ಮಾಲಿನ್ಯಗಳ ಮಿಶ್ರಣವು ಮೈಕೊರೆಯುವ ಚಳಿಗಾಲದ ತಿಂಗಳಲ್ಲಿ ಏರುಗತಿಯಲ್ಲಿರುತ್ತದೆ.

 ಮಗುವಿನ ಮಿದುಳಿಗೆ ಶಾಶ್ವತ ಹಾನಿ 
ಇತ್ತೀಚಿನ ವೈಜ್ಞಾನಿಕ ಸಂಶೋಧನೆಯೊಂದು ವಾಯು ಮಾಲಿನ್ಯವು ಮಗುವಿನ ಮೆದುಳಿಗೆ ಶಾಶ್ವತವಾಗಿ ಹಾನಿವುಂಟುಮಾಡುತ್ತದೆಂಬ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದೆ. 
 ವಾಯು ಮಾಲಿನ್ಯ ಅಂತಾರಾಷ್ಟ್ರೀಯ ಮಿತಿ(ಪ್ರತಿ ಕ್ಯೂಬಿಕ್ ಮೀಟರ್‌ಗೆ 10 ಮೈಕ್ರೋಗ್ರಾಂ) ಗಿಂತ 6 ಪಟ್ಟು ಹೆಚ್ಚಿರುವ ದಕ್ಷಿಣ ಏಷ್ಯಾದ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ
ಮಕ್ಕಳು ವಾಸಿಸುತ್ತಿದ್ದಾರೆಂದು ಯುನಿಸೆಫ್ ವರದಿ ಮಾಡಿದೆ. ಜಗತ್ತಿನ ಅತ್ಯಂತ ಮಾಲಿನ್ಯಕಾರಕ ಪ್ರದೇಶಗಳಲ್ಲಿ  ಒಂದು ವರ್ಷಕ್ಕಿಂತ ಕೆಳಗಿನ 17 ದಶಲಕ್ಷ ಮಕ್ಕಳು
ವಾಸಿಸುತ್ತಿದ್ದಾರೆ. ಅವರ ಪೈಕಿ ದಕ್ಷಿಣ ಏಷ್ಯಾದಲ್ಲೇ 12.2 ದಶಲಕ್ಷ ಮಕ್ಕಳು ವಾಸಿಸುತ್ತಿದ್ದಾರೆಂದರೆ  ಈ ಮಕ್ಕಳ ಭವಿಷ್ಯ ಹೇಗಿರುತ್ತದೆಂದು ಕಲ್ಪಿಸಿಕೊಳ್ಳುವುದೂ ಕಷ್ಟ.
ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿ 4.3 ದಶಲಕ್ಷ ಮಕ್ಕಳು ವಿಷಗಾಳಿ ಸೇವಿಸುತ್ತಾ ಬದುಕುತ್ತಿವೆ. 
 ವಾಯು ಮಾಲಿನ್ಯ ಇಷ್ಟೊಂದು ಅಪಾಯಕಾರಿ ಮಟ್ಟವನ್ನು ಮುಟ್ಟುವ ಹಂತ ತಲುಪಿದ್ದರೂ ನಾವೇಕೆ ಸುಮ್ಮನಿದ್ದೇವೆ. ವಾಯುಮಾಲಿನ್ಯ ನಿವಾರಣೆಗೆ ಸಮರೋಪಾದಿಯಲ್ಲಿ
ಕಾರ್ಯನಿರ್ವಹಿಸಬೇಕಾದ ಅಗತ್ಯ ಈಗ ಕಂಡುಬಂದಿದೆ.
 ಬೆಂಗಳೂರು ಐಟಿ ಸಿಟಿ  ಮತ್ತು ಉದ್ಯಾನನಗರಿ ಎಂದು ಖ್ಯಾತಿ ಗಳಿಸಿದೆ. ಲಕ್ಷಾಂತರ ಜನರ ಜೀವನೋಪಾಯಕ್ಕೆ ಬೆಂಗಳೂರು ದಾರಿಮಾಡಿಕೊಟ್ಟಿದೆ. ಆದರೆ ಬೆಂಗಳೂರಿನಲ್ಲಿ
ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುವುದೆಂದರೆ ಹರಸಾಹಸ ಪಡಬೇಕಾಗುತ್ತದೆ. ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್. ಬೆಂಗಳೂರಿನಲ್ಲಿ ವಾಹನಗಳ
ದಟ್ಟಣೆಯಿಂದ ಮತ್ತು ಟ್ರಾಫಿಕ್ ಜಾಂನಿಂದ ಕೂಡ ವಿಷಕಣಗಳು ವಾಯುವನ್ನು ಸೇರುತ್ತಿದೆ. ಆದರೆ ಬೆಂಗಳೂರಿನಲ್ಲಿ ಬೆಳೆದುನಿಂತಿರುವ ಸಾವಿರಾರು ಮರಗಳು
ವಾಯುಮಾಲಿನ್ಯದಿಂದ ನಮ್ಮನ್ನು ರಕ್ಷಿಸುತ್ತಿದೆಯೆಂದರೆ ನಂಬಲೇಬೇಕು. 
ವಾಯುಮಾಲಿನ್ಯ ತಗ್ಗಿಸಲು ಮತ್ತು ನಿಯಂತ್ರಣದಲ್ಲಿಡಲು ಕೆಲವು ಕ್ರಮಗಳು ಕೆಳಗಿನಂತಿವೆ
1. ಅರಣ್ಯ ಪ್ರದೇಶವನ್ನು ಸಂರಕ್ಷಿಸಬೇಕು. ಸಾಕಷ್ಟು ಅರಣ್ಯ ಪ್ರದೇಶವಿರುವುದು ವಾಯುವಿನ ಗುಣಮಟ್ಟ ಕಾಯ್ದುಕೊಳ್ಳಲು ಅವಶ್ಯಕ. ಮರಗಳು ಇಂಗಾಲದ ಡೈಆಕ್ಸೈಡ್
ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತವೆ.
2. ದಟ್ಟವಾದ ಜನಸಂಖ್ಯೆಯಿರುವ ನಗರಗಳಲ್ಲಿ ಗ್ರೀನ್ ಬೆಲ್ಟ್ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು. ಗ್ರೀನ್ ಬೆಲ್ಟ್ ಪ್ರದೇಶಗಳಲ್ಲಿ ದೊಡ್ಡ ಕಟ್ಟಡಗಳು ಮತ್ತು  ಕೈಗಾರಿಕೆಗಳ
ಸ್ಥಾಪನೆಗೆ ಕಠಿಣ ನಿರ್ಬಂಧವಿರಬೇಕು.
3. ವಾಹನಗಳಿಂದ ಹೊಮ್ಮುವ ಹೊಗೆ ಕನಿಷ್ಠ ಮಾಲಿನ್ಯ ಉಂಟುಮಾಡುವ ರೀತಿಯಲ್ಲಿ ಎಂಜಿನ್‌ಗಳನ್ನು ಮರುವಿನ್ಯಾಸಗೊಳಿಸಬೇಕು. ಹಳೆ ವಾಹನಗಳ ಎಂಜಿನ್‌ಗಳಿಗೆ
ಬದಲಾಗಿ ಹೊಸದನ್ನು ಅಳವಡಿಸಬೇಕು.
4. ರೈಲ್ವೆ ಉಗಿ ಎಂಜಿನ್ ಬಳಕೆಯನ್ನು ನಿಲ್ಲಿಸಬೇಕು. ದಹನೀಯ ವಸ್ತುಗಳಾದ  ಕಲ್ಲಿದ್ದಲು ಉತ್ಪನ್ನಗಳ ಉರಿಯುವಿಕೆಯಿಂದ ವಿಷಕಾರಿ ಅನಿಲಗಳು ಗಾಳಿಯಲ್ಲಿ ಸೇರುತ್ತವೆ.
ಡೀಸೆಲ್ ಅಥವಾ ಸ್ಟೀಮ್ ಎಂಜಿನ್ ಬದಲಿಗೆ ಎಲೆಕ್ಟ್ರಿಕ್ ಎಂಜಿನ್‌ಗಳನ್ನು ಬಳಸಬೇಕು.
 5.ಕೈಗಾರಿಕಾ ಪ್ರದೇಶಗಳು ವಸತಿ ಪ್ರದೇಶಗಳಿಂದ ಸುರಕ್ಷಿತ ದೂರದಲ್ಲಿರಬೇಕು. ಹೊಸದಾಗಿ ವಿನ್ಯಾಸಗೊಳಿಸಿದ ಹೊಗೆಮುಕ್ತ ಫರ್ನೇಸ್‌ಗಳನ್ನು ಬಳಸಬೇಕು. ಕಾಡ್ಗಿಚ್ಚು
ಹರಡದಂತೆ ತಡೆಯಲು  ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
6. ಕೈಗಾರಿಕೆಗಳಲ್ಲಿ ಮಾಲಿನ್ಯನಿಯಂತ್ರಣಕ್ಕೆ ವ್ಯವಸ್ಥೆ ಇರಬೇಕು. ವಾಯು ಮಾಲಿನ್ಯ ನಿವಾರಣೆಯು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರ ಜಂಟಿ
ಪ್ರಯತ್ನಗಳಿಂದ ಮಾತ್ರ ನಿವಾರಿಸಲು ಸಾಧ್ಯ. 
 

Recent Comments

Leave Comments

footer
Top