ಕಾಡ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸುವ ಸಂದೇಶ ಪ್ರಸಾರ ಮಾಡಲು ಖ್ಯಾತ ಚಿತ್ರನಟ ದರ್ಶನ್ ಅವರನ್ನು ಬಳಸಿಕೊಂಡ ಸುದ್ದಿ ಇತ್ತೀಚೆಗೆ ಪ್ರಕಟವಾಗಿತ್ತು. ನಮ್ಮ ಜನರಿಗೆ ಇಂತಹ ಚಿತ್ರನಟರು ಸಂದೇಶ ನೀಡಿದಾಗಲೇ ವಾಸ್ತವತೆಯ ಅರಿವಾಗುತ್ತದೆಯೇ ಏನೋ. ಏಕೆಂದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಹದಗೆಡುತ್ತಿರುವ ಬಗ್ಗೆ, ಜಲಮಾಲಿನ್ಯದ ಬಗ್ಗೆ , ಪರಿಸರ ಮಾಲಿನ್ಯದ ಬಗ್ಗೆ ಜನರು ಯೋಚಿಸುತ್ತಿದ್ದಾರಯೇ? ಕಾಡ್ಗಿಚ್ಚು ಬಗ್ಗೆ ದರ್ಶನ್ ಸಂದೇಶ ನೀಡಿದ ಕೂಡಲೇ ನಮಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬಂದು ಏಕೆ ನಾಡಿನ ಜನರಲ್ಲಿ ಭಯ, ಭೀತಿ ಹುಟ್ಟಿಸುತ್ತಿವೆ ಎಂಬ ಪ್ರಶ್ನೆ ಕಾಡುತ್ತದೆ.
ಕಾಡ್ಗಿಚ್ಚು, ಕಾಡಿನಲ್ಲಿ ತೀವ್ರ ನೀರಿನ ಕ್ಷಾಮ, ಬೇಟೆಯಾಡಲು ಸಿಗದಿರುವ ಪ್ರಾಣಿಗಳು. ಇದರಿಂದ ಹಸಿವು, ಬಾಯಾರಿಕೆಯಿಂದ ಪ್ರಾಣಿಗಳು ಪರಿತಪಿಸುತ್ತಿರುತ್ತವೆ. ಆಗಲೇ ಆಹಾರ ಹುಡುಕಿಕೊಂಡು ನಾಡಿಗೆ ಬರುವುದು ಸಹಜ. ಅರಣ್ಯ ಇಲಾಖೆ ಕಾಡಿನಲ್ಲೇ ಪ್ರಾಣಿಗಳಿಗೆ ನೀರಿನ ಸೌಲಭ್ಯ ಮತ್ತು ಅವುಗಳಿಗೆ ಆಹಾರ ಒದಗಿಸಲು ಸೂಕ್ತ ಮಾರ್ಗೋಪಾಯಗಳನ್ನು ಮಾಡಿದರೆ ಆಹಾರ, ನೀರಡಿಕೆಯಿಂದ ಪ್ರಾಣಿಗಳು ನಾಡಿಗೆ ಬರುವ ಪ್ರಮೇಯವಿರುವುದಿಲ್ಲ.
ಕಾಡಿನಲ್ಲಿ ಅಲ್ಲಲ್ಲಿ ಹಳ್ಳಗಳನ್ನು ತೋಡಿ ಮಳೆಗಾಲದಲ್ಲಿ ನೀರು ನಿಲ್ಲುವಂತೆ ಮಾಡಬಹುದು. ಆದರೆ ಬೇಸಿಗೆಯಲ್ಲಿ ಆನೆ, ಹುಲಿ, ಚಿರತೆ ಮುಂತಾದ ಪ್ರಾಣಿಗಳಿಗೆ ವಿಪರೀತ ನೀರಿನ ದಾಹ. ಇದಕ್ಕಾಗಿ ಕಾಡಿನಲ್ಲಿರುವ ಬತ್ತಿಹೋದ ನೀರಿನ ಸೆಲೆಗಳಿಗೆ ಪೈಪ್ಗಳ ಮೂಲಕ ನೀರು ಪೂರೈಕೆ ಮಾಡುವುದಕ್ಕೆ ಸಾಧ್ಯವೇ ಎಂದು ಪರಿಶೀಲಿಸಬಹುದು. ಹಳ್ಳಿಗಳಲ್ಲಿ ಸರಿಯಾಗಿ ಉದ್ಯೋಗಾವಕಾಶ, ಮೂಲಭೂತ ಸೌಲಭ್ಯಗಳಿಲ್ಲದೇ ಗ್ರಾಮಸ್ಥರು ಪಟ್ಟಣಗಳಿಗೆ ಗುಳೇ ಹೋಗುವಂತೆ ಪ್ರಾಣಿಗಳು ಕೂಡ ಕಾಡಿನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅವುಗಳನ್ನು ಅರಸಿಕೊಂಡು ನಾಡಿಗೆ ಪ್ರಯಾಣಿಸುತ್ತವೆ. ಅರಣ್ಯ ಇಲಾಖೆ ಇದನ್ನು ಮನಗಂಡು ಕಾಡಿನಲ್ಲೇ ಎಲ್ಲಾ ಸೌಲಭ್ಯ ಕಲ್ಪಿಸಿದರೆ ತಮ್ಮ ಹುಟ್ಟೂರನ್ನು ಬಿಟ್ಟು ಪರವೂರಿಗೆ ಪ್ರಾಣಿಗಳು ಏಕೆ ಬರುತ್ತವೆ?
Recent Comments