• 17 December 2018 01:25
Jai Kannada
Jai Kannada
Blog single photo
March 06, 2018

ಪ್ರಜಾಕೀಯ, ಕಾಂಗ್ರೆಸ್, ಬಿಜೆಪಿ ಪರಿಕಲ್ಪನೆ 

ಚಿತ್ರ ನಟ ಉಪೇಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಛಾಪು ಮೂಡಿಸಿದವರು. ಈಗ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಇದಕ್ಕಾಗಿ ಪ್ರಜಾಕೀಯ ಎಂಬ ಹೊಸ ಪಕ್ಷದ ನೋಂದಣಿಗೆ ಸಿದ್ದತೆ ನಡೆಸಿದ್ದಾರೆ. ರಾಜಕೀಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವ್ಯಕ್ತಿಪೂಜೆ ಮೊದಲಾದವುಗಳನ್ನು ಗಮನಿಸಿದ್ದ ಉಪೇಂದ್ರ ಜನಸಾಮಾನ್ಯರೇ ಪ್ರಜಾಕೀಯದ ಮುಖಂಡರಾಗಬೇಕೆಂದು ಬಯಸಿದ್ದಾರೆ. 

ತಮ್ಮ ಪಕ್ಷವು ಜನಸಾಮಾನ್ಯರ ಕೈಗೆ ಅಧಿಕಾರ ನೀಡುವ ಮೂಲಕ ಜನರ ಕಷ್ಟ, ಸುಖಗಳಲ್ಲಿ ಭಾಗಿಯಾಗಬೇಕೆಂದು  ಬಯಸಿದ್ದಾರೆ. ಉಪೇಂದ್ರ ಅವರ ಪ್ರಜಾರಾಜ್ಯದ ಪರಿಕಲ್ಪನೆ ಒಳ್ಳೆಯದೇ. ಆದರೆ ಒಂದು ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲು, ಪಕ್ಷವನ್ನು ಬಲಿಷ್ಠಗೊಳಿಸಲು ಆರ್ಥಿಕನೆರವು ಖಂಡಿತವಾಗಿ ಬೇಕಾಗುತ್ತದೆ. ಉಪೇಂದ್ರ ಅವರು ಪಕ್ಷದ ಬಲವರ್ಧನೆಗೆ ಸ್ವಲ್ಪ ಪ್ರಮಾಣದಲ್ಲಾದರೂ ದೇಣಿಗೆ ಸಂಗ್ರಹಿಸಬೇಕಾಗುತ್ತದೆ. 

 ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೆಗೆದುಕೊಂಡರೆ ಎರಡೂ ಪಕ್ಷಗಳು ವಿರುದ್ಧ ದಿಕ್ಕಿನಲ್ಲಿ ಮುಖಮಾಡಿದ್ದರೂ ಅವುಗಳ ಪರಿಕಲ್ಪನೆ ಒಂದೇ. ಅಧಿಕಾರದ ಗದ್ದುಗೆ ಏರುವುದು ಅವೆರಡು ಪಕ್ಷಗಳ ಕನಸು. ಅದಕ್ಕಾಗಿ ಮತದಾನಕ್ಕೆ ಮುಂಚೆ ವೋಟಿಗಾಗಿ ನೋಟು ನೀಡುವುದಕ್ಕೂ ಅವು ಸಿದ್ದವಿರುತ್ತದೆ. ಹೀಗೆ ಚುನಾವಣೆಗೆ ಕೋಟ್ಯಂತರ ರೂ. ಹಣವನ್ನು ಖರ್ಚು ಮಾಡುವ ಅಭ್ಯರ್ಥಿಗಳು ಗೆದ್ದ ಮೇಲೆ ಆ ಹಣ ಮರಳಿ ಸಂಪಾದನೆಗೆ ವಾಮ ಮಾರ್ಗ ಹಿಡಿಯುವುದಿಲ್ಲವೆನ್ನುವುದು ಯಾವ ಗ್ಯಾರಂಟಿ. ವೋಟಿಗಾಗಿ ನೋಟು ನೀಡುವ ಈ ಪರಿಪಾಠಕ್ಕೆ ಬ್ರೇಕ್ ಹಾಕಲು ಚುನಾವಣೆ ಆಯೋಗಕ್ಕೆ ಮಾತ್ರ ಈವರೆಗೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರವು ಕೂಡ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ದಿವ್ಯ ಮೌನ ವಹಿಸಿದೆ. ಇನ್ನು ಸರ್ಕಾರದ ಫಂಡ್‌ನಿಂದ ಕೋಟ್ಯಂತರ ಹಣವನ್ನು ನೀರಿನಂತೆ ಖರ್ಚು ಮಾಡುವ ಪ್ರವೃತ್ತಿಗೂ ಬ್ರೇಕ್ ಹಾಕುವುದಕ್ಕೆ ಸಾಧ್ಯವಾಗಿಲ್ಲ. ವಿಧಾನಸೌಧದ ವಜ್ರಮಹೋತ್ಸವ ಸಮಾರಂಭಕ್ಕೆ 10 ಕೋಟಿ ರೂ. ಬಿಡುಗಡೆ ಮಾಡಿದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಸಾರ್ವಜನಿಕ ಹಣವನ್ನು ಬೇಕಾಬಿಟ್ಟಿಯಾಗಿ ದುಂದುವೆಚ್ಚ ಮಾಡುವ ಸರ್ಕಾರಗಳ ಈ ಪ್ರವೃತ್ತಿಗೆ ಯಾವಾಗ ಬ್ರೇಕ್ ಬೀಳುತ್ತದೆ ದೇವರಿಗೇ ಗೊತ್ತು. ಇನ್ನು ಸರ್ಕಾರದ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಿರಂತರ ಪ್ರಕ್ರಿಯೆ. ಇದರ ಜತೆ ಜನಸಾಮಾನ್ಯರ ವಿವಿಧ ಸೇವೆಗಳಿಗೆ ಕೂಡ ಕಮೀಷನ್ ರೂಪದಲ್ಲಿ ಹಣ ಪಡೆಯುವ ಪ್ರವೃತ್ತಿ ಯಾವುದೇ ಪಕ್ಷ ಬಂದರೂ ನಿಲ್ಲಿಸಲು ಸಾಧ್ಯವಾಗಿಲ್ಲ. ಬಿಬಿಎಂಪಿ, ಬೆಸ್ಕಾಂ, ಅಬ್ಕಾರಿ, ಆಸ್ತಿ ನೋಂದಣಿ ಇಲಾಖೆಗಳಲ್ಲಿ ಕಮೀಷನ್ ಹಾವಳಿ ಕಬಂಧ ಬಾಹುಗಳನ್ನು ಚಾಚಿದೆ.

ಈ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡಿದರೂ ಮಂತ್ರಿಮಹೋದಯರು ಕಣ್ಣು ಮುಚ್ಚಿಕುಳಿತಿರುವುದು ಮೌನಂ ಸಮ್ಮತಿ ಲಕ್ಷಣಂ ಎನ್ನುವುದಕ್ಕೆ ಉದಾಹರಣೆ. ಇನ್ನು ತಮ್ಮ ಪಕ್ಷದ ಪ್ರಚಾರಕ್ಕಾಗಿ ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದಕ್ಕೆ ಪಕ್ಷಗಳು ಲಕ್ಷಾಂತರ ರೂ. ಖರ್ಚು ಮಾಡುತ್ತವೆನ್ನುವುದು ಜಗಜ್ಜಾಹೀರು. ಬಹುಶಃ ವಿವಿಧ ರಾಜಕೀಯ ಪಕ್ಷಗಳ ಈ ಪ್ರವೃತ್ತಿಯನ್ನು ಮನಗಂಡಿರುವ ಉಪೇಂದ್ರ ಅವರು ಯಾವ ದೊಡ್ಡ ಪಕ್ಷಕ್ಕೆ ಸೇರುವ ಗೋಜಿಗೆ ಹೋಗದೇ ಪ್ರಜಾರಾಜ್ಯದ ಕಲ್ಪನೆಗೆ ಬೀಜ ಬಿತ್ತಿರಬಹುದು.

Recent Comments

Leave Comments

footer
Top