ವಿಧಾನಸಭೆಯಲ್ಲಿ ಅಧಿವೇಶನ ಮುಗಿಯುವ ದಿನ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಿಟಿ ಆರಂಭವಾಗಿತ್ತು. ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರ್ಕಾರವನ್ನು 10% ಕಮೀಷನ್ ಸರ್ಕಾರ ಎಂದು ಹೇಳಿದ್ದನ್ನು ಉಲ್ಲೇಖಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಪ್ರಹಾರ ಮಾಡಿದರು.
ನಮ್ಮದು 10% ಸರ್ಕಾರವಾದರೆ ಬಿಜೆಪಿಯದ್ದು 90% ಕಮೀಷನ್ ಸರ್ಕಾರ ಎಂದು ಟೀಕಿಸಿದ್ದರು. ಆಗ ಜಗದೀಶ್ ಶೆಟ್ಟರ್ ಅದನ್ನು ಸಾಬೀತು ಮಾಡುವಂತೆ ಹೇಳಿದಾಗ ಸಿದ್ದರಾಮಯ್ಯ ನೀವು ನಮ್ಮದು 10% ಸರ್ಕಾರವೆಂದು ಹೇಳಿದ್ದೀರಲ್ಲಾ, ಅದನ್ನು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದರು. ಕಾಂಗ್ರೆಸ್ ಸರ್ಕಾರವಿದ್ದಾಗ ಬಿಜೆಪಿಯವರು ಭ್ರಷ್ಟಾಚಾರದ ಆರೋಪಗಳನ್ನು ಮಾಡುವುದು ಮತ್ತು ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪಗಳನ್ನು ಮಾಡುವುದು ಸರ್ವೇಸಾಮಾನ್ಯವಾಗಿದೆ.
ಆದರೆ ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೂ ಲಂಚದ ವಿಷಯದಲ್ಲಿ ಸಾಚಾ ಅಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದು. ವಾಸ್ತವ ಸಂಗತಿಯೇನೆಂದರೆ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರವು ಬಲವಾಗಿ ಬೇರುಬಿಟ್ಟಿದ್ದು, ಅಂತಹ ಬೇರನ್ನು ಕಿತ್ತೊಗೆಯಲು ಎಂತಹ ಘಟಾನುಘಟಿ ಲೋಕಾಯುಕ್ತ ಅಥವಾ ಬೇರಾವುದೇ ಸಂಸ್ಥೆಯಿಂದಲೂ ಸಾಧ್ಯವಿಲ್ಲ. ಇಂದು ಕಾಂಗ್ರೆಸ್ ಸರ್ಕಾರದಲ್ಲಿ ಕಮೀಷನ್ ದಂಧೆ ನಡೆಯುತ್ತಿರಬಹುದು. ಆದರೆ ಒಂದು ವೇಳೆ ಬಿಜೆಪಿ ಸರ್ಕಾರ ಮುಂದಿನ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದರೂ ಕಮೀಷನ್ ದಂಧೆಯನ್ನು ನಿಲ್ಲಿಸುತ್ತದೆಂಬ ವಿಶ್ವಾಸವಿಲ್ಲ. ಏಕೆಂದರೆ ಕಮೀಷನ್ ದಂಧೆಯ ಟೇಪನ್ನು ಸರ್ಕಾರಿ ಇಲಾಖೆಗಳಲ್ಲಿ ಫೆವಿಕಾಲ್ನಿಂದ ಬಲವಾಗಿ ಅಂಟಿಸಲಾಗಿರುತ್ತದೆ. ಇದಕ್ಕೆ ಉದಾಹರಣೆ ಬಿಬಿಎಂಪಿ, ಬೆಸ್ಕಾಂ ಮತ್ತು ಅಬ್ಕಾರಿ ಇಲಾಖೆಗಳು. ಈ ಇಲಾಖೆಗಳಲ್ಲಿ ಗ್ರಾಹಕರ ಪ್ರತಿಯೊಂದು ಸೇವೆಗೆ ಇಷ್ಟು ಪರ್ಸಂಟೇಜ್ ಎನ್ನುವುದು ನಿಗದಿಯಾಗಿರುತ್ತದೆ. ಶಾಸಕರು, ಮಂತ್ರಿಗಳು ಮತ್ತು ಅಧಿಕಾರಿಗಳ ಸಂಬಳ ಒಬ್ಬ ಖಾಸಗಿ ಕಂಪನಿಯ ಮ್ಯಾನೇಜರ್ ಸಂಬಳದಷ್ಟೂ ಇರುವುದಿಲ್ಲ. ಆದರೂ ಕೂಡ ಸರ್ಕಾರಿ ಅಧಿಕಾರಿಗಳು ಖಾಸಗಿ ಕಂಪನಿಯ ಮ್ಯಾನೇಜರ್ಗಿಂತ ಹೆಚ್ಚು ಅದ್ಧೂರಿ ಜೀವನ ನಡೆಸುತ್ತಾರೆಂದರೆ ಅವರ ಗಿಂಬಳ ಎಷ್ಟಿರಬಹುದೆಂದು ಲೆಕ್ಕಹಾಕಬಹುದು. ಈ ಪರ್ಸಂಟೇಜ್ ವ್ಯವಹಾರ ಕೇವಲ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದೆ, ಬೇರಾರಿಗೂ ಈ ಪರ್ಸಂಟೇಜ್ ಸಿಗುವುದಿಲ್ಲ ಎಂದು ಭಾವಿಸಬೇಡಿ. ಏಕೆಂದರೆ ಈ ಪರ್ಸಂಟೇಜ್ನ ಸ್ವಲ್ಪ ಭಾಗ ಅಧಿಕಾರಿ, ಕೆಲವು ಶಾಸಕರು ಮತ್ತು ಮಂತ್ರಿಗಳಿಗೂ ಸಂದಾಯವಾಗಿರುತ್ತದೆ. ಮಂತ್ರಿಗಳಿಗೆ ಕುಳಿತಲ್ಲೇ ಈ ಕಮೀಷನ್ ಹಣದ ಸ್ವಲ್ಪ ಭಾಗ ಸಂದಾಯವಾಗಬಹುದು. ಏಕೆಂದರೆ ಈ ಕಮೀಷನ್ ದಂಧೆ ನಡೆಯುತ್ತಿರುವುದು ಗೊತ್ತಿದ್ದೂ ಅದನ್ನು ನಿಲ್ಲಿಸಲು ಪ್ರಯತ್ನಿಸದೇ ರಾಜಾರೋಷವಾಗಿ ನಡೆಸಲು ಪರ್ಮಿಟ್ ನೀಡಿರುವುದು ಅವರೂ ಸಹ ಅದರಲ್ಲಿ ಭಾಗಿಯಾಗಿರಬಹುದು ಎಂಬ ಸಂಶಯಕ್ಕೆ ಎಡೆಮಾಡಿಕೊಡುತ್ತದೆ.
ಇನ್ನು ಬಿಬಿಎಂಪಿಯಲ್ಲಿ ಕೂಡ ಪ್ಲಾನ್ ಸಾಂಕ್ಷನ್ ಮಾಡಿಸಲು ಹೋದಾಗ ಅಥವಾ ಖಾತೆ ಮಾಡಿಸಲು ಹೋದಾಗ ಲಂಚದ ಅನುಭವವಾಗದೇ ಇರದು. ಇಷ್ಟೆಲ್ಲಾ ಪರ್ಸಂಟೇಜ್ ಪಡೆದೂ ಕೂಡ ಕೆಲಸವನ್ನು ನಿಧಾನಗತಿಯಲ್ಲಿ ಮಾಡಿಕೊಡುವ ನಮ್ಮ ಸರ್ಕಾರಿ ನೌಕರರ ಕಾರ್ಯಕ್ಷಮತೆಯನ್ನು ಮೆಚ್ಚಬೇಕಾಗಿದೆ. ಇನ್ನು ಈ ಕಮೀಷನ್ ಹಣವನ್ನು ಬಿಬಿಎಂಪಿ ಎಂಜಿನಿಯರು ಅವರಪ್ಪನಾಣೆಗೂ ಕೈಯಲ್ಲಿ ಮುಟ್ಟುವುದಿಲ್ಲ. ಪುಸ್ತಕ ಅಥವಾ ಬೇರಾವುದೇ ಸಾಧನದ ಮೂಲಕ ಅವರಿಗೆ ವರ್ಗಾವಣೆಯಾಗಿರುತ್ತದೆ. ಎಲ್ಲದಕ್ಕೂ ಲಂಚಕ್ಕೆ ಕೈಚಾಚುವ ಅಭ್ಯಾಸ ಮಾಡಿಕೊಂಡ ಸರ್ಕಾರಿ ನೌಕರರು ಗ್ರಾಹಕರನ್ನು ಬೇಟೆಗಾರನ ಕೈಗೆ ಸಿಕ್ಕ ಮಿಕದಂತೆ ಕಾಣುವುದರಲ್ಲಿ ಸಂಶಯವಿಲ್ಲ. ಈ ಕಮೀಷನ್ ದಂಧೆ ನಿರಂತರ, ಇದನ್ನು ನಿಲ್ಲಿಸಲು ಬ್ರಹ್ಮ ಬಂದರೂ ಸಾಧ್ಯವಿಲ್ಲ ಎನ್ನುವುದು ಜನರ ಭಾವನೆ. ಹೀಗಾಗಿ ಸರ್ಕಾರಿ ಕಚೇರಿಗಳಿಗೆ ಹೋದಾಗಲೆಲ್ಲಾ ಜೇಬಲ್ಲಿ ಒಂದಷ್ಟು ಎಕ್ಸ್ಟ್ರಾ ಮನಿ ಇಟ್ಟುಕೊಂಡೇ ಕಚೇರಿಗಳಿಗೆ ಎಡತಾಕುವ ಅಭ್ಯಾಸ ಜನರಿಗೆ ಅಂಟಿಕೊಂಡಿದೆ.
ಇನ್ನು ಶಾಸಕರು, ಮಂತ್ರಿಗಳು ಅಧಿಕಾರಕ್ಕೇರಿದ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ರೂ. ಹಣ ಗಳಿಸುತ್ತಿರುವುದು ಹಾಗೂ ಅವರ ಆದಾಯ ಹೆಚ್ಚಳವಾಗುವುದಕ್ಕೆ ಈ ಕಮೀಷನ್ ದಂಥೆ ಪರೋಕ್ಷ ನೆರವಾಗಿದೆಯಂದರೆ ತಪ್ಪಾಗಲಾರದು.
Recent Comments