Jai Kannada
Jai Kannada
Blog single photo
February 19, 2018

ಲೈಂಗಿಕ ಕ್ರಿಯೆ ನಿರಾಕರಿಸಿದ ಯುವತಿಯನ್ನು ಕೊಂದ ಫೇಸ್‌ಬುಕ್ ಫ್ರೆಂಡ್ 

 ಮುಂಬೈ: ತನ್ನ ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ಅವನ ಮನೆಗೆ ತೆರಳಿದ್ದ 20 ವರ್ಷ ವಯಸ್ಸಿನ ಯುವತಿಯೊಬ್ಬಳು ಭಾನುವಾರ ರಾತ್ರಿ 7 ಗಂಟೆಗೆ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಅಂಕಿತಾ ಮೋರ್ ಎಂಬ ಈ ಯುವತಿ ತನ್ನ ಸ್ನೇಹಿತ ಹರಿದಾಸ್ ನಿರ್ಗುಡೆಯನ್ನು ಭೇಟಿ ಮಾಡಲು ಅವನ ಫ್ಲಾಟ್‌ಗೆ ತೆರಳಿದ್ದಳು. ಫೇಸ್ ಬುಕ್ ಮೂಲಕ ಹರಿದಾಸ್ ಅವಳಿಗೆ ಸ್ನೇಹಿತನಾಗಿದ್ದ. 

ಯುವತಿಯ ದೇಹವು ನಲಸಾಪುರದ ನಾಲ್ಕು ಮಹಡಿಗಳ ಟಾನಿಯಾ ಮೊನಾರ್ಕ್ ಕಟ್ಟಡದ ನೆಲಮಹಡಿಯ ಬಳಿಯ ಮೆಟ್ಟಿಲುಗಳ ಮೇಲೆ ಬಿದ್ದಿದ್ದನ್ನು ಅಲ್ಲಿನ ನಿವಾಸಿಯೊಬ್ಬರು ನೋಡಿದರು. ನಿವಾಸಿ ಸಂತೋಷ್ ಉಳಿದ ನಿವಾಸಿಗಳಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರಿಗೆ ಕರೆ ಮಾಡಲಾಯಿತು. ಯುವತಿಯನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಅವಳು ಮೃತಳಾಗಿದ್ದಾಳೆಂದು ವೈದ್ಯರು ಘೋಷಿಸಿದರು.

ನೆಲಮಹಡಿಯ ಫ್ಲಾಟ್‌ಗೆ ಆ ಯುವತಿ ಭೇಟಿ ನೀಡಿದ್ದನ್ನು ಕಂಡಿದ್ದಾಗಿ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದು, ಕಟ್ಟಡದಲ್ಲಿ ಸಿಸಿಟಿವಿ ಸೌಲಭ್ಯ ಇರಲಿಲ್ಲ. ಬಳಿಕ ಯುವತಿಯ ಸ್ನೇಹಿತ ನಿರ್ಗುಡೆಯ ಕೊಠಡಿಯಲ್ಲಿ ರಕ್ತದ ಕಲೆಗಳನ್ನು ಪೊಲೀಸರು ಪತ್ತೆಹಚ್ಚಿದಾಗ, ಫ್ಲಾಟ್‌ನಲ್ಲಿದ್ದ ನಿರ್ಗುಡೆ ತಾನೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಯುವತಿಯ ಸೆಲ್ ಫೋನ್ ಮತ್ತು ಪರ್ಸ್ ಕೂಡ ನಿರ್ಗುಡೆ ನಿವಾಸದಲ್ಲಿ ಪತ್ತೆಯಾಗಿದೆ. ನಿರ್ಗುಡೆ ತನ್ನ ಸೋದರಿಯ ಜತೆ ಫ್ಲಾಟ್‌ನಲ್ಲಿ ವಾಸವಿದ್ದ. ಯುವತಿ ಭೇಟಿ ನೀಡಿದ ಸಮಯದಲ್ಲಿ ಅವನ ಸೋದರಿ ಫ್ಲಾಟ್‌ನಲ್ಲಿರಲಿಲ್ಲ,.

 ಸಂಜೆ ಯುವತಿ ಫ್ಲಾಟ್ ತಲುಪಿದ್ದಳು. ನಿರ್ಗುಡೆ ಒಂಟಿಯಾಗಿದ್ದ ಯುವತಿಯನ್ನು ನೋಡಿದ ಕೂಡ ತನ್ನ ಜತೆ ಲೈಂಗಿಕ ಸಂಪರ್ಕ ಹೊಂದುವಂತೆ ಯುವತಿಗೆ ಒತ್ತಾಯಿಸಿದ. ಆದರೆ ಮದುವೆಗೆ ಮುನ್ನ ಲೈಂಗಿಕ ಸಂಪರ್ಕವನ್ನು ಯುವತಿ ಖಡಾಖಂಡಿತವಾಗಿ ನಿರಾಕರಿಸಿದ್ದಳು.ನಿರ್ಗುಡೆಯನ್ನು ವಿಚಾರಣೆಗೆ ಒಳಪಡಿಸಿದಾಗ ಯುವತಿ ತನ್ನ ಜತೆ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದ್ದರಿಂದ ಕೋಪಗೊಂಡು ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅವನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Recent Comments

Leave Comments

footer
Top