• 09 April 2020 22:39
Jai Kannada
Jai Kannada
Blog single photo
March 26, 2020

ಲಾಕ್ ಔಟ್ ಸಂಕಷ್ಟಕ್ಕೊಳಗಾದ ಬಡವರಿಗೆ ಪರಿಹಾರಗಳನ್ನು ಘೋಷಿಸಿದ ನಿರ್ಮಲಾ ಸೀತಾರಾಮನ್ 

ನವದೆಹಲಿ: ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ ಲಾಕ್ಔಟ್ ಘೋಷಿಸಿದ್ದರಿಂದ ಸಂಕಷ್ಟಕ್ಕೊಳಗಾದ ಬಡವರಿಗೆ ಗರೀಬ್ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಈ ಯೋಜನೆಗಾಗಿ 1.70 ಲಕ್ಷ ಕೋಟಿ ರೂ.ಗಳನ್ನು ಮೀಸಲಾಗಿಡಲಾಗುತ್ತದೆ ಎಂದು ತಿಳಿಸಿದರು.

ಈ ಯೋಜನೆಯಡಿ ಬಡವರಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಬಡವರು, ವಲಸಿಗ ಕಾರ್ಮಿಕರು, ಗ್ರಾಮೀಣ ಪ್ರದೇಶದ ಜನರಿಗೆ ಈ ಯೋಜನೆಯಡಿ ನೆರವು ನೀಡಲಾಗುತ್ತದೆ. ಮೊದಲಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 5 ಕೆಜಿ ಅಕ್ಕಿ ಅಥವಾ 5 ಕೆಜಿ ಗೋಧಿಯನ್ನು ಹೆಚ್ಚುವರಿ ಪಡಿತರವಾಗಿ ಮುಂದಿನ ಮೂರು ತಿಂಗಳು ಉಚಿತವಾಗಿ ನೀಡುತ್ತೇವೆ. ಒಂದು ಕೆಜಿ ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸೀತಾರಾಮನ್ ಹೇಳಿದರು. ರೈತರಿಗೆ ವಾರ್ಷಿಕ 6000 ರೂ.ಗಳನ್ನು ಕಿಸಾನ್ ಸಮ್ಮಾನ್ ನಿಧಿಯನ್ನು ಈಗಾಗಲೇ ನೀಡಲಾಗುತ್ತಿದೆ.  8.69 ಕೋಟಿ ರೈತರಿಗೆ ನಾವು 2000 ರೂ. ಕಂತನ್ನು ಈಗಲೇ ಬಿಡುಗಡೆ ಮಾಡುತ್ತೇವೆ. ಮನರೇಗಾ ಯೋಜನೆಯಡಿ ದಿನಗೂಲಿಯನ್ನು 180ರಿಂದ 200 ರೂ.ಗೆ ಏರಿಸಲಾಗುತ್ತದೆ. 60 ವರ್ಷಕ್ಕಿಂತ ಮೇಲಿನ ಬಡ ಹಿರಿಯ ನಾಗರಿಕರಿಗೆ, ಬಡ ವಿಧವೆಯರಿಗೆ, ದಿವ್ಯಾಂಗರಿಗೆ ಮೂರು ತಿಂಗಳ ಕಾಲ 1000 ರೂ. ಪಿಂಚಣಿ ನೀಡಲು ನಿರ್ಧರಿಸಲಾಗಿದೆ.

ಇದರಿಂದ 3 ಕೋಟಿ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. 20 ಕೋಟಿ ಜನ್‌ಧನ್ ಖಾತೆಗಳಿಗೆ ತಲಾ 500 ರೂ. 3 ತಿಂಗಳು ವರ್ಗಾವಣೆ ಮಾಡಲಾಗುತ್ತದೆ. ಉಜ್ವಲಾ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ 3 ತಿಂಗಳ ಕಾಲ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಗುತ್ತದೆ. ಇದರಿಂದ 8 ಕೋಟಿ ಬಿಪಿಲ್ ಕುಟುಂಬಗಳಿಗೆ ನೆರವಾಗುತ್ತದೆ. ಸ್ವ-ಸಹಾಯ ಮಹಿಳಾ ಸಂಘಗಳಿಗೆ ಸಾಲವನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುತ್ತದೆ ಎಂದು ಪ್ರಕಟಿಸಿದರು.

ಮುಂದಿನ ಮೂರು ತಿಂಗಳು ಸಂಘಟಿತ ವಲಯದ ಕಾರ್ಮಿಕರಿಗೆ ಶೇ. 24ರಷ್ಟು ಭವಿಷ್ಯ ನಿಧಿಯನ್ನು ಸರ್ಕಾರ ಭರಿಸುತ್ತದೆ. ಪಿಎಫ್ ಹಣದಲ್ಲಿ ಶೇ. 75ರಷ್ಟು ನಗದು ಡ್ರಾ ಮಾಡಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು. ರಾಜ್ಯಸರ್ಕಾರಗಳ ಬಳಿಯಿರುವ 31 ಸಾವಿರ ಕೋಟಿ ಅನುದಾನ ಬಳಕೆಗೆ ಆದೇಶ ನೀಡಲಾಗಿದ್ದು, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲಿದೆ.

Recent Comments

Leave Comments

footer
Top