• 09 April 2020 22:19
Jai Kannada
Jai Kannada
Blog single photo
March 24, 2020

ಇಡೀ ರಾಷ್ಟ್ರದಲ್ಲಿ ಮೂರು ವಾರಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ ಪ್ರಧಾನಿ ಮೋದಿ 

 ನವದೆಹಲಿ: ಕೊರೊನಾ ಮಹಾಮಾರಿಯಿಂದ ಬಚಾವಾಗಲು ಇಡೀ ರಾಷ್ಟ್ರವನ್ನು ಮೂರು ವಾರಗಳ ಕಾಲ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಇಂದು ರಾತ್ರಿ 12 ಗಂಟೆಯಿಂದ ಈ ಲಾಕ್ ಡೌನ್ ಜಾರಿಗೆ ಬರಲಿದೆ ಎಂದು ತಿಳಿಸಿದರು.  ವಿಶ್ವದಲ್ಲಿ 67 ದಿನಗಳಲ್ಲಿ ಒಂದು ಲಕ್ಷ ಜನರಿಗೆ ಕೊರೊನಾ ಸೋಂಕು ತಗಲಿದೆ. ಇನ್ನೊಂದು ಲಕ್ಷ ಜನರಿಗೆ ಕೇವಲ 11 ದಿನಗಳಲ್ಲಿ ತಗುಲಿದೆ. ಇನ್ನೊಂದು ಲಕ್ಷ ಜನರಿಗೆ ಸೋಂಕು ತಾಗಲು ಕೇವಲ 4 ದಿನಗಳು ಸಾಕಾಯಿತು. ಇಷ್ಟೊಂದು ವೇಗವಾಗಿ ಜನರಿಗೆ ಸೋಂಕು ತಗಲಿಸುವ ಈ ಮಹಾಮಾರಿಯಿಂದ ಇಟಲಿ, ಚೀನಾ . ಅಮೆರಿಕಾ, ಸ್ಪೇನ್, ಇರಾನ್  ಮುಂತಾದ ದೇಶಗಳು ಜರ್ಝರಿತವಾಗಿವೆ.

ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ನೀವು  21 ದಿನಗಳ ಕಾಲ ಮನೆಯಲ್ಲೇ ಉಳಿಯಿರಿ. ರಸ್ತೆಗೆ ಇಳಿಯಬೇಡಿ. ನಾನು ಕೈಜೋಡಿಸಿ ನಿಮಗೆ ಈ ಮನವಿ ಮಾಡುತ್ತೇನೆ ಎಂದು ಪ್ರಧಾನಿ ನುಡಿದರು. ಬಹುತೇಕ ರಾಷ್ಟ್ರಗಳು ಕೊರೊನಾದಿಂದ ಕಂಗಾಲಾಗಿವೆ. ಅವು ಅತ್ಯಾಧುನಿಕ ಆರೋಗ್ಯ ಸೌಲಭ್ಯ ಹೊಂದಿದ್ದರೂ ಕೊರೊನಾದಿಂದ ಜನರ ಜೀವ ಉಳಿಸಲಾಗಲಿಲ್ಲ.

ಇನ್ನು ನಮ್ಮ ಪರಿಸ್ಥಿತಿ ಹೇಗಾಗಬಹುದು ನೀವೇ ಊಹಿಸಿ ಎಂದು ಮೋದಿ ಕೊರೊನಾದ ಭೀಕರತೆ ಕುರಿತು ಹೇಳಿದರು.  24 ಗಂಟೆ ಕೆಲಸ ಮಾಡುತ್ತಿರುವ ವೈದ್ಯರು, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ಬಗ್ಗೆಯೂ ನಾವು ಯೋಚಿಸಬೇಕಾಗಿದೆ.  21 ದಿನ ನೀವು ಮನೆಯಲ್ಲೇ ಉಳಿಯದಿದ್ದರೆ ನೀವು 21 ವರ್ಷಗಳಷ್ಟು ಹಿಂದೆ ಹೋಗುತ್ತೀರಿ ಎಂದು ಎಚ್ಚರಿಸಿದರು. ಪ್ರಧಾನಿಯಾಗಿ ಅಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಹೇಳುತ್ತಿದ್ದೇನೆ ಎಂದು ನುಡಿದರು. 

Recent Comments

Leave Comments

footer
Top