• 15 December 2019 13:37
Jai Kannada
Jai Kannada
Blog single photo
November 26, 2019

ಅಜಿತ್ ಪವಾರ್ ರಾಜೀನಾಮೆ ಬೆನ್ನಲ್ಲೇ 3 ದಿನಗಳಲ್ಲಿ ಸಿಎಂ ಹುದ್ದೆಗೆ ಫಡ್ನಾವಿಸ್ ರಾಜೀನಾಮೆ

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಹಾವು, ಏಣಿ ಆಟ ಮುಂದುವರಿದಿದ್ದು, ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ದೇವೇಂದ್ರ ಫಡ್ನಾವಿಸ್ ಮಂಗಳವಾರ ರಾಜೀನಾಮೆ ಸಲ್ಲಿಸುವ ಮೂಲಕ ಮಹಾರಾಷ್ಟ್ರದಲ್ಲಿ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿದೆ.

ಫಡ್ನಾವಿಸ್ ಅವರಿಗೆ ಬೆಂಬಲವಾಗಿ ನಿಂತಿದ್ದ ಎನ್‌ಸಿಪಿಯ ಅಜಿತ್ ಪವಾರ್ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ ಫಡ್ನಾವಿಸ್ ತಮ್ಮ ಪಕ್ಷ ಬಹುಮತ ಕಳೆದುಕೊಂಡಿದೆಯೆಂದು ಹೇಳಿ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಪಾಳೆಯಕ್ಕೆ ಧುಮುಕಿದ್ದ ಅಜಿತ್ ಪವಾರ್, ಫಡ್ನಾವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಅಜಿತ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು

. ಫಡ್ನಾವಿಸ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಎನ್ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆ ಪಾಳೆಯವು ತಮ್ಮ ಶಾಸಕರ ಶಕ್ತಿ ಪ್ರದರ್ಶನ ಮಾಡಿತ್ತು. ಈ ನಡುವೆ ಕಾರಣಾಂತರಗಳಿಂದ ಅಜಿತ್ ಪವಾರ್ ಡೆಪ್ಯೂಟಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರಿಂದ ಫಡ್ನಾವಿಸ್ ಅವರಿಗೆ ತಾವು ಬಹುಮತ ತೋರಿಸುವುದು ಕಷ್ಟದ ಕೆಲಸವೆಂದು ಅರಿವಾದ್ದರಿಂದ ಅವರು ಕೂಡ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದರು.

ಇಂದು ಪತ್ರಿಕಾಗೋಷ್ಠಿ ನಡೆಸಿದ ಫಡ್ನಾವಿಸ್, ಬಹುಮತ ಸಾಬೀತಿಗೆ ತಾವು ಕುದುರೆ ವ್ಯಾಪಾರ ಮಾಡುವುದಿಲ್ಲವೆಂದು ಮೊದಲ ದಿನದಿಂದಲೇ ನಿರ್ಧರಿಸಿದ್ದಾಗಿ ತಿಳಿಸಿದರು. ಮಾಜಿ ಮಿತ್ರ ಪಕ್ಷ ಶಿವಸೇನೆ ಮುಖ್ಯಮಂತ್ರಿ ಪದವಿಯನ್ನು ಕೈವಶ ಮಾಡಿಕೊಳ್ಳುವ ಹತಾಶ ಸ್ಥಿತಿಯಲ್ಲಿದೆ. ಹಿಂದುತ್ವದ ಮಂತ್ರವನ್ನು ಕೈಬಿಟ್ಟು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಕಾಲಿಗೆ ಎರಗುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕಮಾತ್ರ ಉದ್ದೇಶ ಹೊಂದಿದೆ ಎಂದು ಟೀಕಿಸಿದರು. ಸೈದ್ಧಾಂತಿಕ ಬೇಧಗಳಿಂದ ಕೂಡಿದ ಮೂರು ಪಕ್ಷಗಳು ಸರ್ಕಾರ ರಚಿಸಿದರೆ ಅದರ ಸ್ಥಿರತೆ ಹೇಗೆ ಉಳಿಯುತ್ತದೆ ಎಂದು ಫಡ್ನಾವಿಸ್ ಪ್ರಶ್ನಿಸಿದರು.  ಸೇನಾ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರವು ಆಟೋರಿಕ್ಷಾದ ರೀತಿಯಲ್ಲಿದ್ದು, ಅದರ ಮೂರು ಚಕ್ರಗಳು ಭಿನ್ನ ದಿಕ್ಕುಗಳಲ್ಲಿ ಚಲಿಸುವ ಮೂಲಕ ತಲೆಕೆಳಗಾಗುತ್ತದೆ ಎಂದು ಫಡ್ನಾವಿಸ್ ಭವಿಷ್ಯ ನುಡಿದರು. 

Recent Comments

Leave Comments

footer
Top