• 15 December 2019 13:31
Jai Kannada
Jai Kannada
Blog single photo
November 12, 2019

ದೇಹದ ಆರೋಗ್ಯ ಕಾಯ್ದುಕೊಳ್ಳಲು ಸಮತೋಲಿತ ಆಹಾರ ಸೇವನೆ

 ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶಗಳುಳ್ಳ, ನಿರ್ದಿಷ್ಟ ಪ್ರಮಾಣದ  ಆಹಾರ ಸೇವನೆಯೇ ಸಮತೋಲಿತ ಆಹಾರ. ಸಮತೋಲಿತ ಆಹಾರದಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್ಸ್ ಮತ್ತು ಮೈಕ್ರೋನ್ಯೂಟ್ರಿಯೆಂಟ್ಸ್ ಎರಡೂ ಒಳಗೊಂಡಿರಬೇಕು. ಮ್ಯಾಕ್ರೋನ್ಯೂಟ್ರಿಯಂಟ್ಸ್ ನಮ್ಮ ದೇಹಕ್ಕೆ ಶಕ್ತಿ ನೀಡುವ ಆಹಾರಗಳಾಗಿದ್ದು, ಅವು ಕಾರ್ಬೊಹೈಡ್ರೇಟ್, ಪ್ರೊಟೀನ್ ಮತ್ತು ಕೊಬ್ಬು( ಫ್ಯಾಟ್) ಇವುಗಳಿಂದ ಕೂಡಿವೆ.  ನಾವು ಬೆಳಿಗ್ಗೆ ಸೇವಿಸುವ ಇಡ್ಲಿ, ದೋಸೆ, ಮಧ್ಯಾಹ್ನದ  ಊಟ, ರಾತ್ರಿ ಭೋಜನ ಎಲ್ಲವೂ ಕಾರ್ಬೊಹೈಡ್ರೇಟ್ ಅಂಶಗಳಿಂದ ಕೂಡಿವೆ. ನಮ್ಮ ದೇಹಕ್ಕೆ ಸುಮಾರು 220 ಗ್ರಾಂ ಕಾರ್ಬೊಹೈಡ್ರೇಟ್ ಅವಶ್ಯಕವಾಗಿದ್ದರೆ, ನಮ್ಮ ಒಂದು ಕೆಜಿ ತೂಕಕ್ಕೆ ತಲಾ 0.8 ಗ್ರಾಂ ಪ್ರೊಟೀನ್ ಅಗತ್ಯವಾಗಿರುತ್ತದೆ

ಅಂದರೆ ನಾವು 80 ಕೆಜಿ ತುಕವಿದ್ದರೆ 64 ಗ್ರಾಂ ಪ್ರೊಟೀನ್ ಬೇಕಾಗುತ್ತದೆ. ಅದಕ್ಕಿಂತ ಸ್ವಲ್ಪ ಕಡಿಮೆ ಪ್ರೊಟೀನ್ ಸೇವನೆ ಮಾಡಿದರೂ ಕೂಡ ಯಾವುದೇ ದುಷ್ಪರಿಣಾಮ ಆಗುವುದಿಲ್ಲ. ಇನ್ನು ಕೊಬ್ಬು ಸುಮಾರು 25-30 ಗ್ರಾಂ ಅಗತ್ಯವಿರುತ್ತದೆ. ಇವೆಲ್ಲಾ ಆಹಾರಗಳು ನಮ್ಮ ದೇಹಕ್ಕೆ ಶಕ್ತಿ ಕೊಡುತ್ತವೆ. ದೇಹದಲ್ಲಿ ಕಾರ್ಬೊಹೈಡ್ರೇಟ್ ಕಾರ್ಯವೈಖರಿ ಹೇಗಿರುತ್ತದೆಂದು ಈಗ ತಿಳಿಯೋಣ. ನಾವು ಆಹಾರದ ಮೂಲಕ ಸೇವಿಸುವ ಬಹುತೇಕ ಕಾರ್ಬೊಹೈಡ್ರೇಟ್‌ಗಳು ಜೀರ್ಣವಾಗಿ ರಕ್ತದಲ್ಲಿ ಸೇರಿಕೊಳ್ಳುವ ಮುಂಚೆ ಗ್ಲುಕೋಸ್‌ಗೆ ಪರಿವರ್ತನೆಯಾಗುತ್ತದೆ. ರಕ್ತದಲ್ಲಿರುವ ಗ್ಲುಕೋಸ್ ದೇಹದ ಜೀವಕೋಶಗಳಿಗೆ ಸಾಗಿ ಸೆಲ್ಯೂಲಾರ್ ಉಸಿರಾಟ ಎಂಬ ಜಟಿಲ ಪ್ರಕ್ರಿಯೆಗಳ ಸರಣಿ ಮೂಲಕ ಇಂಧನ ಅಣುವಾದ ಅಡೆನೋಸೈಟನ್ ಟ್ರೈಫಾಸ್ಫೇಟ್ (ಎಟಿಪಿ) ಉತ್ಪಾದಿಸುತ್ತದೆ. ಜೀವಕೋಶಗಳು ಎಟಿಪಿಯನ್ನು ಬಳಸಿಕೊಂಡು ಅನೇಕ ಚಯಾಪಚಯ ಕಾರ್ಯಗಳನ್ನು ನಿರ್ವಹಿಸುತ್ತದೆ. ನಿಮ್ಮ ದೇಹಕ್ಕೆ ಸಾಕಷ್ಟು ಗ್ಲುಕೋಸ್ ಸಿಕ್ಕಿದ ಬಳಿಕ, ಹೆಚ್ಚು ಗ್ಲುಕೋಸ್ ನಂತರದ ಬಳಕೆಗೆ ಸಂಗ್ರಹವಾಗುತ್ತದೆ. ಗ್ಲುಕೋಸಿನ ಈ ಸಂಗ್ರಹರೂಪವನ್ನು ಗ್ಲೈಕೋಜನ್ ಎಂದು ಕರೆಯಲಾಗುತ್ತಿದ್ದು, ಯಕೃತ್ತು ಮತ್ತು ಸ್ನಾಯುವಿನಲ್ಲಿ ಕಂಡುಬರುತ್ತದೆ. ಯಕೃತ್ತು ಸುಮಾರು 100 ಗ್ರಾಂಗಳಷ್ಟು ಗ್ಲೈಕೋಜನ್ ಹೊಂದಿರುತ್ತದೆ. ಈ ಸಂಗ್ರಹಿತ ಗ್ಲುಕೋಸ್ ಅಣುಗಳು ದೇಹವಿಡೀ ಶಕ್ತಿ ಒದಗಿಸಲು ರಕ್ತಕ್ಕೆ ಬಿಡುಗಡೆಯಾಗುತ್ತದೆ ಮತ್ತು ಆಹಾರಗಳ ನಡುವೆ ಸಾಮಾನ್ಯ ರಕ್ತದ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

ದೇಹದ ಪ್ರತಿಯೊಂದು ಜೀವಕೋಶದ ಮುಖ್ಯ ಭಾಗ ಪ್ರೊಟೀನ್. ಪ್ರೊಟೀನ್ ನಮಗೆ ಮಾಂಸ, ಮೊಟ್ಟೆ, ಹಾಲು, ಕಾಳುಗಳು ಮೊದಲಾದ ಆಹಾರಗಳಿಂದ ಸಿಗುತ್ತದೆ.  ಕೂದಲು ಮತ್ತು ಉಗುರುಗಳು ಪ್ರೊಟೀನ್‌ನಿಂದ ನಿರ್ಮಾಣವಾಗಿವೆ. ನಮ್ಮ ಅಂಗಾಂಶಗಳ ನಿರ್ಮಾಣಕ್ಕೆ ಮತ್ತು ದುರಸ್ತಿಗೆ ಪ್ರೊಟೀನ್ ಅಗತ್ಯವಿರುತ್ತದೆ. ಕಿಣ್ವಗಳು, ಹಾರ್ಮೋನುಗಳು ಮತ್ತು ಇತರೆ ರಾಸಾಯನಿಕಗಳ ತಯಾರಿಕೆಗೆ ಪ್ರೊಟೀನ್ ಅಗತ್ಯವಿರುತ್ತದೆ. ಆದರೆ  ಫ್ಯಾಟ್ ಮತ್ತು ಕಾರ್ಬೊಹೈಡ್ರೇಟ್ ರೀತಿಯಲ್ಲಿ ಪ್ರೊಟೀನ್ ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಆದ್ದರಿಂದ ಪ್ರೊಟೀನ್ ದೇಹದಲ್ಲಿ ಅಗತ್ಯವಾದಾಗ ತೆಗೆದುಕೊಳ್ಳಲು ಯಾವುದೇ ಸಂಗ್ರಹಾಗಾರ ದೇಹದಲ್ಲಿಲ್ಲ. ಹೆಚ್ಚುವರಿ ಪ್ರೊಟೀನ್ ಸೇವನೆಯಿಂದ ಸ್ನಾಯು ಬಲಗೊಳ್ಳುತ್ತದೆಂಬ ನಂಬಿಕೆಯಿದೆ.

ಆದರೆ ಸ್ನಾಯುಗಳ ಬೆಳವಣಿಗೆ ದೈಹಿಕ ವ್ಯಾಯಾಮದ ಮೂಲಕವೇ ಸಾಧ್ಯವಾಗುತ್ತದೆ. ಹೆಚ್ಚುವರಿ ಪ್ರೊಟೀನ್‌ನಿಂದ ಹೆಚ್ಚುವರಿ ಶಕ್ತಿಯೇನು ಲಭಿಸುವುದಿಲ್ಲ. ಇನ್ನು ಕೆಲವರು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅಧಿಕ ಪ್ರೊಟೀನ್ ಮತ್ತು ಕಡಿಮೆ ಪ್ರಮಾಣದ ಕಾರ್ಬೊಹೈಡ್ರೇಟ್ ಆಹಾರ ಸೇವನೆ ಮಾಡುತ್ತಾರೆ. . ಆದರೆ ಪ್ರೊಟೀನ್ ಹೆಚ್ಚು ಸೇವನೆ ಮಾಡಿ ಕಾರ್ಬೊಹೈಡ್ರೇಟ್ ಪ್ರಮಾಣ ಕಡಿಮೆ ಮಾಡಿದರೆ, ಅವರ ಚಯಾಪಚಯ ಕ್ರಿಯೆ ಕೆಟೊಸಿಸ್ ಎಂಬ ಸ್ಥಿತಿಗೆ ತಲುಪುತ್ತದೆ. ಏಕೆಂದರೆ ದೇಹವು ಕಾರ್ಬೊಹೈಡ್ರೇಟ್ ಬದಲಿಗೆ ಕೊಬ್ಬನ್ನು ತನ್ನ ಶಕ್ತಿಗೆ ಬಳಸಿಕೊಳ್ಳುತ್ತದೆ. ಕೊಬ್ಬು ಚೂರಾದಾಗ, ಕೆಟೋನ್ ಎಂಬ ಸಣ್ಣ ಚೂರುಗಳು ಶಕ್ತಿ ಮೂಲಗಳಾಗಿ ರಕ್ತದ ಹರಿವಿನಲ್ಲಿ ಸೇರುತ್ತದೆ. ಡಯಾಬಿಟಿಸ್ ರೋಗಿಗಳಲ್ಲಿ ಕೂಡ ಕಂಡುಬರುವ ಕೆಟೊಸಿಸ್ ಹಸಿವನ್ನು ನೀಗಿಸುತ್ತದೆ. ಇದರಿಂದ ಕಡಿಮೆ ಆಹಾರವನ್ನು ಜನರು ಸೇವಿಸುತ್ತಾರೆ ಮತ್ತು ಮೂತ್ರದ ಮೂಲಕ ಹೆಚ್ಚು ದ್ರವಪದಾರ್ಥಗಳು ಹೋಗುತ್ತವೆ. ಇದರಿಂದ ದೇಹದ ನೀರಿನ ತೂಕ ಕೂಡ ಕಡಿಮೆಯಾಗುತ್ತದೆ. ಆದ್ದರಿಂದ ಪ್ರೊಟೀನ್ ಹೆಚ್ಚು ಸೇವಿಸುವ ಭರದಲ್ಲಿ ಕಾರ್ಬೊಹೈಡ್ರೇಟ್ ಸೇವನೆಯನ್ನು ತುಂಬಾ ಕಡಿಮೆ ಮಾಡಿದರೆ ಅಪಾಯ ತಪ್ಪಿದ್ದಲ್ಲ.

ಹೆಚ್ಚು ಪ್ರೊಟೀನ್ ಆಹಾರ ಸೇವನೆ ಮಾಡುವವರಿಗೆ ಮೂತ್ರದಲ್ಲಿ ಹೆಚ್ಚು ಕ್ಯಾಲ್ಸಿಯಂ ಅಂಶ ಹೋಗುತ್ತದೆ. ಪ್ರೊಟೀನ್ ಸೇವನೆಯಿಂದಾಗುವ ಹೆಚ್ಚು ಆ್ಯಸಿಡ್‌ಗಳ ಪ್ರತಿರೋಧಕ್ಕೆ ದೇಹವು ಹೆಚ್ಚು ಕ್ಯಾಲ್ಸಿಯಂ ಅನ್ನು ರಕ್ತದಹರಿವಿನಲ್ಲಿ ಬಿಡುಗಡೆ ಮಾಡುತ್ತದೆ. ಕ್ಯಾಲ್ಸಿಯಂನ ವಿಪರೀತ ನಷ್ಟದಿಂದ ಮೂಳೆಸವೆತ ರೋಗ ಉಂಟಾಗುವ ಸಾಧ್ಯತೆಯಿರುತ್ತದೆ. 
ನಮ್ಮ ದೇಹಕ್ಕೆ ಕೊಬ್ಬು ಅಗತ್ಯವಾಗಿದೆಯಾ, ಹೌದು ನಮ್ಮ ದೇಹಕ್ಕೆ ಕೊಬ್ಬು ಅತ್ಯವಶ್ಯಕವಾಗಿ ಬೇಕಾಗಿದೆ. ದೇಹಕ್ಕೆ ಶಕ್ತಿ ತುಂಬಲು ಮತ್ತು ಜೀವಕೋಶಗಳ ಬೆಳವಣಿಗೆಗೆ ಕೊಬ್ಬು ಅಗತ್ಯವಾಗಿ ಬೇಕಾಗುತ್ತದೆ. ನಮ್ಮ ದೇಹದ ಅಂಗಾಂಗಗಳನ್ನು ಕೂಡ ಅವು ರಕ್ಷಿಸುತ್ತದೆ ಮತ್ತು ದೇಹವನ್ನು ಬೆಚ್ಚಗೆ ಇಡುತ್ತದೆ. ಕೊಬ್ಬು ಕೆಲವು ಪೌಷ್ಠಿಕಾಂಶಗಳನ್ನು ಕೂಡ ಹೀರಿಕೊಳ್ಳುತ್ತದೆ ಮತ್ತು ಕೆಲವು ಮುಖ್ಯ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ದೇಹಕ್ಕೆ ಕೊಬ್ಬ ಅತ್ಯವಶ್ಯಕವಾಗಿದೆ. ಕೊಬ್ಬುಗಳಲ್ಲಿ ಎಷ್ಟು ವಿಧ?

1. ಸ್ಯಾಚ್ಯುರೇಟೆಡ್ ಕೊಬ್ಬು, 2. ಟ್ರಾನ್ಸ್ ಫ್ಯಾಟ್, 3. ಮೊನೋಸ್ಯಾಚ್ಯುರೇಟೆಡ್ ಕೊಬ್ಬು 4.ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬು. ನಾಲ್ಕು ವಿಧದ ಕೊಬ್ಬುಗಳು ಭಿನ್ನ ರಾಸಾಯನಿಕ ರಚನೆ ಮತ್ತು ಬೌತಿಕ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ಕೆಟ್ಟ ಕೊಬ್ಬುಗಳು ಮತ್ತು ಒಳ್ಳೆಯ ಕೊಬ್ಬುಗಳು ಎಂಬ ಎರಡು ವಿಧಗಳಿವೆ. ಕೆಟ್ಟ ಕೊಬ್ಬುಗಳು ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್‌ಗಳು. ಸಾಮಾನ್ಯ ಉಷ್ಣಾಂಶದಲ್ಲಿ ಬೆಣ್ಣೆಯಂತೆ ಘನೀಕರಣಗೊಳ್ಳುತ್ತವೆ, ಒಳ್ಳೆಯ ಕೊಬ್ಬುಗಳಾದ ಮೊನೋ ಸ್ಯಾಚುರೇಟೆಡ್ ಮತ್ತು ಪಾಲಿ ಸ್ಯಾಚುರೇಟಡ್ ಕೊಬ್ಬುಗಳು ಧ್ರವದ ರೂಪದಲ್ಲೇ ಇರುತ್ತವೆ. ಕೆಟ್ಟ ಕೊಬ್ಬುಗಳು ನಮ್ಮ ರಕ್ತದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಒಳ್ಳೆಯ ಕೊಬ್ಬುಗಳು ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸುತ್ತದೆ. ಪ್ರತಿ ಗ್ರಾಂ ಕೊಬ್ಬಿನಲ್ಲಿ 9 ಗ್ರಾಂ ಕ್ಯಾಲರಿಗಳಿರು್ತತದೆ. ಕಾರ್ಬೊಹೈಡ್ರೇಟ್ ಮತ್ತು ಪ್ರೊಟೀನ್‌ಗಿಂತ ಕೊಬ್ಬಿನಲ್ಲಿ ಹೆಚ್ಚು ಶಕ್ತಿ ಉತ್ಪಾದನೆಯಾಗುತ್ತದೆ. ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ ಹೆಚ್ಚು ಸೇವನೆಯಿಂದ ಹೃದಯಬೇನೆ ಮತ್ತು ಸ್ಟ್ರೋಕ್‌ಗೆ ದಾರಿ ಕಲ್ಪಿಸುತ್ತದೆ. ಆದ್ದರಿಂದ ಆಹಾರ ತಜ್ಞರು ಅವುಗಳನ್ನು ಹೆಚ್ಚು ಸೇವಿಸದಂತೆ ಎಚ್ಚರಿಸುತ್ತಾರೆ. 
ಮುಂದಿನ ಲೇಖನದಲ್ಲಿ ಮೈಕ್ರೋನ್ಯೂಟ್ರಿಯೆಂಟ್ಸ್ ಕುರಿತ ಮಾಹಿತಿ 

Recent Comments

Leave Comments

footer
Top