ಚೆನ್ನೈ: ಭಾರತೀಯ ಆಡಳಿತ ಸೇವೆಯಲ್ಲಿ ರಾಜಕಾರಣಿಗಳಿಗೆ ಚುನಾವಣೆ ಆಯೋಗದ ನಿಜವಾದ ಶಕ್ತಿಯನ್ನು ತೋರಿಸಿದ, ಚುನಾವಣೆ ಸುಧಾರಣೆಗೆ ಶ್ರಮಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ ತಮಿಳುನಾಡು ಕೇಡರ್ ಐಎಎಸ್ ಅಧಿಕಾರಿ ಟಿ.ಎನ್. ಶೇಷನ್ ಚೆನ್ನೈನ ತಮ್ಮ ನಿವಾಸದಲ್ಲಿ ಭಾನುವಾರ ಮೃತರಾಗಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಶನಿವಾರ ರಾತ್ರಿ ಶೇಷನ್ ಜತೆ ಮಾತನಾಡಿದ್ದ ಅವರ ಸ್ನೇಹಿತ ನಂಬಿಯಾರ್, ಈ ಕುರಿತು ತಿಳಿಸುತ್ತಾ, ಶೇಷನ್ ರಾತ್ರಿ ಭೋಜನ ಮುಗಿಸಿ ಹಾಸಿಗೆಯಲ್ಲಿ ಮಲಗಿದ್ದಾಗ 9.45ಕ್ಕೆ ಹಠಾತ್ ನಿಧನರಾಗಿದ್ದಾರೆಂದು ತಿಳಿಸಿದರು. 1955ನೇ ಬ್ಯಾಚ್ ಐಎಎಸ್ ಅಧಿಕಾರಿಯಾದ ಶೇಷನ್ ವಿವಿಧ ಹುದ್ದೆಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 1990ರ ಡಿ. 12ರಿಂದ 1996ರ ಡಿ. 11ರವರೆಗೆ 10ನೇ ಮುಖ್ಯ ಚುನಾವಣಾಧಿಕಾರಿಯಾಗಿ ಅವರ ದಕ್ಷ ಕಾರ್ಯನಿರ್ವಹಣೆಯಿಂದ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದರು.
ರಾಜಕಾರಣಿಗಳು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದ ಸಂದರ್ಭದಲ್ಲಿ, ಶೇಷನ್ ಚುನಾವಣೆ ನಿರ್ವಹಣೆಯಲ್ಲಿ ನಿಯಮ ಪುಸ್ತಕವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿ ಶಿಸ್ತಿನ ಪ್ರಜ್ಞೆಯನ್ನು ತಂದಿದ್ದರು. ಶೇಷನ್ ಅವರು ಮಹೋನ್ನತ ಅಧಿಕಾರಿಯಾಗಿದ್ದರು. ಚುನಾವಣೆ ಸುಧಾರಣೆಯಲ್ಲಿ ಅವರ ಪ್ರಯತ್ನಗಳಿಂದ ಪ್ರಜಾಪ್ರಭುತ್ವವನ್ನು ಹೆಚ್ಚು ಗಟ್ಟಿಗೊಳಿಸಿದೆ. ಅವರ ನಿಧನದಿಂದ ತುಂಬಾ ದುಃಖವಾಗಿದೆ, ಓಂ ಶಾಂತಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
Recent Comments