ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆಯಿಂದ ದಂಡ ಕಟ್ಟಿ ಸಾರ್ವಜನಿಕರು ಹೈರಾಣಾಗಿದ್ದಾರೆ. ಗುಜರಾತಿನಲ್ಲಿ ಮೋಟಾರು ವಾಹನ ಕಾಯ್ದೆಯ ದಂಡವನ್ನು ಇಳಿಸಿರುವ ನಡುವೆ ಅದೇ ಮಾದರಿಯನ್ನು ಅನುಸರಿಸಲು ಸಿಎಂ ಯಡಿಯೂರಪ್ಪ ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಗುಜರಾತ್ ಮಾದರಿಯ ದಂಡ ಇಳಿಕೆಯ ಬಗ್ಗೆ ಅಧ್ಯಯನ ಮಾಡಿ ತೆಗೆದುಕೊಂಡು ಬನ್ನಿ. ಆ ಮಾದರಿ ನಮಗೆ ಸೂಕ್ತವೆನಿಸಿದರೆ ಅನುಸರಿಸುವಂತೆ ಸಿಎಂ ಸಲಹೆ ಮಾಡಿದ್ದಾರೆ.
ಹಳೇ ದರದ ಪ್ರಕಾರ ಲೈಸನ್ಸ್ ಇಲ್ಲದೇ ಚಾಲನೆ ಮಾಡಿದರೆ ಮುಂಚಿನ 500 ರೂ. ಬದಲಿಗೆ 5000 ರೂ. ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ರಹಿತ ಚಾಲನೆಗೆ 1000 ರೂ.ಗೆ ಏರಿಕೆಯಾಗಿದೆ. ದುಬಾರಿ ದಂಡ ತೆತ್ತು ಮೋಟಾರು ವಾಹನ ಸವಾರರ ಆಕ್ರೋಶವು ಮುಗಿಲುಮುಟ್ಟಿದೆ. ದಂಡದ ಹಣ ನಮ್ಮ ಒಂದು ವಾರದ ಕೂಲಿ ಎಂದು ಕೆಲವರು ಅಲವತ್ತುಕೊಂಡರೆ ಇನ್ನೂ ಕೆಲವರು ಟ್ರಾಫಿಕ್ ಇಲಾಖೆಯ ಜವಾಬ್ದಾರಿಗಳ ಬಗ್ಗೆಯೂ ನೆನಪಿಸಿದ್ದಾರೆ.
ದರ ಪರಿಷ್ಕರಣೆ 2-3 ದಿನಗಳಲ್ಲಿ ಬರಬಹುದೆಂದು ಅಂದಾಜಿಸಲಾಗಿದೆ. ದುಬಾರಿ ದರವನ್ನು ವಿಧಿಸುವ ಮೊದಲು ನಗರದ ರಸ್ತೆಗಳ ಸ್ಥಿತಿಗತಿಯನ್ನು ಮೊದಲಿಗೆ ಸುಧಾರಿಸಿ ಎಂದು ವಾಹನ ಸವಾರರು ಟ್ರಾಫಿಕ್ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡಿದ್ದರು. ಇವೆಲ್ಲಾ ವಿಷಯಗಳನ್ನು ಗಮನಿಸಿ ಗುಜರಾತ್ ಮಾದರಿಯಲ್ಲಿ ಮೋಟಾರು ವಾಹನ ದಂಡದ ದರವನ್ನು ವಿಧಿಸಲು ಸಿಎಂ ನಿರ್ಧರಿಸಿದ್ದಾರೆ.
Recent Comments