ಕಾಬುಲ್: ಆಫ್ಘಾನಿಸ್ತಾನದ ವಿವಾಹ ಮಂಟಪದಲ್ಲಿ ಕಿಕ್ಕಿರಿದು ತುಂಬಿದ್ದ ಜನರ ನಡುವೆ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡಿದ್ದರಿಂದ ಮದುವೆ ಮನೆಯಲ್ಲಿ ತುಂಬಿದ್ದ ಸಂಭ್ರಮ, ಸಡಗರ ಕೆಲವೇ ಕ್ಷಣಗಳಲ್ಲಿ ಭಯಭೀತಿ ಮತ್ತು ಹತ್ಯಾಕಾಂಡಕ್ಕೆ ತಿರುಗಿತು. ಈ ಘಟನೆಯಲ್ಲಿ ಸುಮಾರು 63 ಜನರು ಮೃತಪಟ್ಟಿದ್ದು, ಕಾಬುಲಿಗೆ ಅಪ್ಪಳಿಸಿದ ಮಾರಕ ದಾಳಿ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಫ್ಘಾನಿಸ್ತಾನದಲ್ಲಿ ಅಮೆರಿಕದ ಮಿಲಿಟರಿ ಉಪಸ್ಥಿತಿಯನ್ನು ತಗ್ಗಿಸುವ ಒಪ್ಪಂದ ಮತ್ತು ಕದನವಿರಾಮಕ್ಕೆ ನೀಲನಕ್ಷೆಯ ಆಶಯ ಹೊಂದಿದ್ದಾಗಲೇ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ.
ಮಧ್ಯಾಹ್ನ ಮದುವೆಗೆ ಬಂದಿದ್ದ ಆಹ್ವಾನಿತರು ನಗುತ್ತಾ ಹರಸುವುದನ್ನು ಕಂಡಿದ್ದ ಮಧುಮಗ, ಕೆಲವೇ ಗಂಟೆಗಳಲ್ಲಿ ಅವರ ದೇಹಗಳನ್ನು ಸಾಗಿಸುತ್ತಿರುವುದನ್ನು ಕಂಡು ಮರುಗಿದರು. ಈ ದಾಳಿಯು ನನ್ನ ಸಂತೋಷವನ್ನು ದುಃಖವಾಗಿ ಪರಿವರ್ತಿಸಿತು ಎಂದು ವರ ಮಿರ್ವೈಸ್ ತಿಳಿಸಿದರು. ನನ್ನ ಕುಟುಂಬ, ನನ್ನ ವಧು ಆಘಾತಕ್ಕೀಡಾಗಿದ್ದಾರೆ. ಅವರಿಗೆ ಮಾತನಾಡಲು ಕೂಡ ಪದ ಹೊರಡುತ್ತಿಲ್ಲ.
ನನ್ನ ವಧು ಆಗಾಗ್ಗೆ ಎಚ್ಚರತಪ್ಪುತ್ತಿದ್ದಾರೆ ಎಂದು ಹೇಳಿದ ವರ, ನನ್ನ ಸೋದರ, ಸ್ನೇಹಿತರು, ಸಂಬಂಧಿಗಳು ಎಲ್ಲರನ್ನೂ ಕಳೆದುಕೊಂಡೆ, ಇನ್ನು ನನ್ನ ಜೀವನದಲ್ಲಿ ಸಂತೋಷವೇ ಕಾಣುವುದಿಲ್ಲ ಎಂದು ವರ ದುಃಖದಿಂದ ಹೇಳಿದ್ದಾನೆ. ಕನಿಷ್ಠ 63 ಜನರು ಸತ್ತಿದ್ದು, 182 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಒಳಾಡಳಿತ ಸಚಿವಾಲಯದ ವಕ್ತಾರ ರಹೀಮಿ ತಿಳಿಸಿದ್ದಾರೆ.
ಮದುವೆಗೆ ಬಂದಿದ್ದ ಅತಿಥಿಗಳು ನೃತ್ಯ ಮತ್ತು ಪಾರ್ಟಿ ಸಂಭ್ರಮದಲ್ಲಿ ಮುಳುಗಿದ್ದಾಗಲೇ ಸ್ಫೋಟ ಸಂಭವಿಸಿತ್ತು ಎಂದು 23 ವರ್ಷದ ಮುನಿರ್ ಅಹ್ಮದ್ ತಿಳಿಸಿದ್ದಾರೆ.
Recent Comments