• 08 April 2020 04:59
Jai Kannada
Jai Kannada
Blog single photo
July 24, 2019

 ಆಪದ್ಬಾಂಧವರಾಗಿ ಸರ್ಕಾರ ಸ್ಥಾಪನೆಗೆ ನೆರವಾದ ಅತೃಪ್ತ ಶಾಸಕರನ್ನು ಬಿಜೆಪಿ ಹೇಗೆ ರಕ್ಷಿಸುತ್ತದೆ? 

ಕರ್ನಾಟಕದಲ್ಲಿ ಕಳೆದ  15 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ಕುಮಾರಸ್ವಾಮಿ ಸರ್ಕಾರ ರಾಜೀನಾಮೆ ನೀಡುವುದರೊಂದಿಗೆ ಅಂತಿಮ ತೆರೆಬಿದ್ದಿದೆ.  ಕುಮಾರಸ್ವಾಮಿ ರಾಜೀನಾಮೆಗೆ ಅತೃಪ್ತಶಾಸಕರ ಪಾತ್ರ ಮಹತ್ತರವಾಗಿದ್ದರೂ ಅವರು ಮಾತ್ರ ಎಲ್ಲೋ ಪುಣೆಯ ಮೂಲೆಯಲ್ಲಿ ಅಜ್ಞಾತರಾಗಿ ಉಳಿದಿದ್ದಾರೆ.  ಮುಂಬೈನ ಸರ್ಪಕಾವಲಿನ ರೆನೈಸೆನ್ಸ್ ಹೊಟೆಲ್‌ನಲ್ಲಿ ತಂಗಿದ್ದ ಶಾಸಕರಿಗೆ ಕಾಂಗ್ರೆಸ್ ಪ್ರತಿಭಟನೆಯ ಬಿಸಿ ತಟ್ಟಿದಾಗ ಸೀದಾ ಪುಣೆಯ ಅಜ್ಞಾತ ಸ್ಥಳವೊಂದಕ್ಕೆ ಅವರು ದೌಡಾಯಿಸಿದರು. ಆದರೆ ಪರೋಕ್ಷವಾಗಿ ದೋಸ್ತಿ ಸರ್ಕಾರದ ಪತನಕ್ಕೆ ನಾಂದಿ ಹಾಡಿದ ಈ ಅತೃಪ್ತ ಶಾಸಕರ ಮುಂದಿನ ಭವಿಷ್ಯವೇನು? ಬಿಜೆಪಿ ಅವರಿಗೆ ಉತ್ತಮ ಸ್ಥಾನಮಾನದ ಆಶ್ವಾಸನೆ ನೀಡಿದ್ದರೂ ಸ್ಪೀಕರ್ ಅನರ್ಹತೆ ಅಸ್ತ್ರವನ್ನು ಶಾಸಕರ ವಿರುದ್ಧ ಕಟ್ಟುನಿಟ್ಟಾಗಿ ಪ್ರಯೋಗಿಸಿದರೆ ಅವರ ಗತಿಏನು? ಸ್ಪೀಕರ್ ಅಧಿಕಾರವ್ಯಾಪ್ತಿಯಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲವೆಂದು ಸುಪ್ರೀಂಕೋರ್ಟ್ ಮೌನವಹಿಸಿದರೆ ಶಾಸಕರಿಗೆ ದೇವರೇ ಗತಿ. ಸುಪ್ರೀಂಕೋರ್ಟ್ ಶಾಸಕರಿಗೆ ಬಲವಂತ ಮಾಡಿ ವಿಶ್ವಾಸ ಮತ ಯಾಚನೆಗೆ ಕರೆತರುವಂತಿಲ್ಲ ಎಂದು ಹೇಳಿದ್ದು ನಿಜ. ಆದರೆ ಅವರ ವಿರುದ್ಧ ವಿಪ್ ಪ್ಪಯೋಗಿಸುವಂತಿಲ್ಲವೆಂಬ ಅರ್ಥವನ್ನು ಅದಕ್ಕೆ ಕಲ್ಪಿಸಲು ಸಾಧ್ಯವಾಗುವುದಿಲ್ಲ. ರಾಜೀನಾಮೆ ನೀಡಿದ ಶಾಸಕರು ಅನರ್ಹತೆ ಶಿಕ್ಷೆಯಿಂದ ಪಾರಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿಲ್ಲ. ರಾಜೀನಾಮೆ ನೀಡಿದ್ದರೂ ಇನ್ನೂ ಶಾಸಕರಾಗಿಯೇ ಉಳಿದಿರುತ್ತಾರೆಂಬ ವಾದವನ್ನು ಕಾಂಗ್ರೆಸ್ ಮುಂಚಿನಿಂದ ಪ್ರತಿಪಾದಿಸುತ್ತಾ ಬಂದಿದೆ. 

. ಈ ನಡುವೆ ದೋಸ್ತಿ ಸರ್ಕಾರದ ಮುಖಂಡರು ಕೊಟ್ಟ ಎಚ್ಚರಿಕೆಯಿಂದ ಅತೃಪ್ತ ಶಾಸಕರಲ್ಲಿ ಸ್ವಲ್ಪ ಅಳುಕು, ಭಯದ ಸುಳಿ ಕಾಡುತ್ತಿದೆ. ತಕ್ಷಣವೇ ವಾಪಸ್ ಬಂದರೆ ಏನಾದರೂ ಗಂಡಾಂತರ ಆಗಬಹುದು ಎಂಬ ಆತಂಕದ ಕಾರ್ಮೋಡ ಅವರಲ್ಲಿ ಕವಿದಿದೆ.  ಹೀಗಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿ ಹೊಸ ಸರ್ಕಾರ ಸ್ಥಾಪನೆಯಾದ ಮೇಲೆ ಅವರು ಮರಳಿ ಮನೆಗೆ ಬರಬಹುದೆಂದು ಅಂದಾಜು ಮಾಡಲಾಗಿದೆ. ಪಕ್ಷ ಬಿಟ್ಟು ಹೋದವರನ್ನು ಪ್ರಳಯ ಆದ್ರೂ ಕೂಡ ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಖಡಾಖಂಡಿತವಾಗಿ ಹೇಳಿದ್ದಾರೆ.

ಅತೃಪ್ತ ಶಾಸಕರು ಬೆನ್ನಿಗೆ ಚೂರಿ ಹಾಕಿದರು ಎಂದು  ಕಾಂಗ್ರೆಸ್ ಮುಖಂಡರು ಬುಸುಗುಡುತ್ತಿದ್ದು, ತಕ್ಷಣವೇ ಹಿಂತಿರುಗಿದರೆ ಅವರ ಕೋಪ, ತಾಪಕ್ಕೆ ಗುರಿಯಾಗಬಹುದೆಂಬ ಭಯವೂ ಶಾಸಕರಲ್ಲಿ ಆವರಿಸಿದೆ. 

ಆದರೆ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ವಿಪ್ ಅಸ್ತ್ರ ಪ್ರಯೋಗಿಸಲು ಸಾಧ್ಯವೇ ಎನ್ನುವುದು ಚರ್ಚಾಸ್ಪದ ವಿಷಯವಾಗಿದೆ. ರಾಜೀನಾಮೆ ನೀಡಿದ್ದರೂ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಹೀಗಾಗಿ ಶಾಸಕರಾಗಿಯೇ ಉಳಿದಿರುವುದರಿಂದ ವಿಪ್ ಉಲ್ಲಂಘನೆ ಶಿಕ್ಷೆಗೆ ಅರ್ಹರಾಗುತ್ತಾರೆ ಎನ್ನುವುದು ಕಾಂಗ್ರೆಸ್ ವಾದವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಗೆ ತಮ್ಮ ರಾಜೀನಾಮೆ ಮೂಲಕ ನೆರವಾದ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಅನರ್ಹತೆ ಶಿಕ್ಷೆಯಿಂದ ರಕ್ಷಿಸುವ ಜವಾಬ್ದಾರಿ ಈಗ ಬಿಜೆಪಿ ಹೆಗಲಿಗೆ ಬಿದ್ದಿದೆ.

ಈಗ ಸ್ಪೀಕರ್ ಆಗಿರುವ ರಮೇಶ್ ಕುಮಾರ್ 15 ಮಂದಿ ಶಾಸಕರ ವಿಚಾರಣೆ ನಡೆಸಿ ಅನರ್ಹಗೊಳಿಸಿದರೆ ಬಿಜೆಪಿ ಸರ್ಕಾರದ ಮುಂದಿನ ಕ್ರಮ ಏನು ಎನ್ನುವುದು ಕುತೂಹಲಕಾರಿಯಾಗಿದೆ. ಸುಪ್ರೀಂಕೋರ್ಟ್ ಈ ಶಾಸಕರ ಮೇಲೆ ಅನರ್ಹತೆಯ ದಂಡ ಪ್ರಯೋಗಿಸುವಂತಿಲ್ಲವೆಂದು ತೀರ್ಪು ನೀಡಿದರೆ ಅವರ ಅನರ್ಹತೆ ರದ್ದಾಗುತ್ತದೆ. ಆದರೆ ಸ್ಪೀಕರ್ ಅಧಿಕಾರ ವ್ಯಾಪ್ತಿಯಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲವೆಂದು ಸುಮ್ಮನೇ ಕುಳಿತರೆ ಬಿಜೆಪಿಯ ಮುಂದಿನ ನಡೆ ಏನು? ಬಿಜೆಪಿ ಅನರ್ಹತೆ ಶಿಕ್ಷೆಯಿಂದ ಶಾಸಕರನ್ನು ಹೇಗೆ ಪಾರು ಮಾಡುತ್ತದೆ? ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅವರು ಸ್ಥಾನ ತ್ಯಜಿಸುವಂತೆ ಮಾಡುತ್ತಾರಾ, ತಮ್ಮದೇ ಸ್ಪೀಕರ್ ನೇಮಕ ಮಾಡಿ ಅವರ ಮೂಲಕ ಅನರ್ಹಗೊಂಡ ಶಾಸಕರಿಗೆ ಅನುಕೂಲವಾಗುವಂತೆ ಯಾವುದಾದರೂ ತೀರ್ಪು ನೀಡುವಂತೆ ಮಾಡುತ್ತಾರಾ ಕಾದುನೋಡಬೇಕಾಗಿದೆ. 

Recent Comments

Leave Comments

footer
Top