• 20 October 2019 19:53
Jai Kannada
Jai Kannada
Blog single photo
July 16, 2019

ಇಂಗ್ಲೆಂಡ್ ಮಡಿಲಿಗೆ ವಿಶ್ವಕಪ್ , ಅಂಪೈರ್ ತಪ್ಪಿನಿಂದಾಗಿ ಒಂದು ಹೆಚ್ಚುವರಿ ರನ್; ಟೌಫೆಲ್ 

 ಇಂಗ್ಲೆಂಡ್ ಕ್ರಿಕೆಟ್ ನಿರ್ದೇಶಕ ಆಶ್ಲೀ ಗೈಲ್ಸ್ ತಾವು ವಿಶ್ವಕಪ್ ಟ್ರೋಫಿ ಇಟ್ಟುಕೊಳ್ಳುವುದಕ್ಕೆ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ. ಮಾಜಿ ಅಂಪೈರ್ ಸೈಮನ್ ಟೌಫೆಲ್ ಅವರು ಆತಿಥೇಯತಂಡಕ್ಕೆ ಫೈನಲ್ ಪಂದ್ಯದಲ್ಲಿ ಒಂದು ರನ್ ಹೆಚ್ಚಿಗೆ ನೀಡಲಾಯಿತು ಎಂದು ದೂರಿದ್ದರು. ಬೆನ್ ಸ್ಟೋಕ್ಸ್ ರನ್ ಓಡುವಾಗ ಬ್ಯಾಟಿಗೆ ತಾಗಿದ ಚೆಂಡು ನೇರವಾಗಿ ಬೌಂಡರಿ ಗೆರೆ ದಾಟಿದ್ದರಿಂದ ಅವರಿಗೆ 6 ರನ್ ನೀಡಲಾಗಿತ್ತು. ಅಂಪೈರ್‌ಗಳು ಸ್ಪಷ್ಟ ತಪ್ಪನ್ನು ಎಸಗಿದ್ದಾರೆ. ಫೀಲ್ಡರ್ ಚೆಂಡನ್ನು ಎಸೆದಾಗ ಬ್ಯಾಟ್ಸ್‌ಮನ್ ಎರಡನೇ ರನ್ ಓಡಿರಲಿಲ್ಲ ಎಂದು ಟೌಫೆಲ್ ತಿಳಿಸಿದ್ದಾರೆ. 

 ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆದ ವಿಶ್ವಕಪ್ ರೋಚಕ ಫೈನಲ್ ಪಂದ್ಯದ ಸೂಪರ್ ಓವರಿನಲ್ಲಿ ಟೈ ಆದರೂ ಹೆಚ್ಚು ಬೌಂಡರಿಗಳ ಆಧಾರದ ಮೇಲೆ ಇಂಗ್ಲೆಂಡ್ ಗೆಲುವು ಗಳಿಸುವ ಮೂಲಕ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಸೂಪರ್ ಓವರ್‌ಗೆ ಮುನ್ನ ಎರಡೂ ತಂಡಗಳ ಆಟ ಮೈನವಿರೇಳಿಸುವಂತೆ ಮಾಡಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು. ಒಂದು ಹಂತದಲ್ಲಿ ನ್ಯೂಜಿಲೆಂಡ್ ಪಾಳೆಯದಲ್ಲಿ ಗೆಲುವಿನ ಆಸೆ ಗರಿಗೆದರಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಇಂಗ್ಲೆಂಡ್ ಸ್ಕೋರ್ ಗಳಿಸಿ ಪಂದ್ಯ 241 ರನ್‌ಗೆ ಟೈ ಆಗಿತ್ತು.  ನ್ಯೂಜಿಲೆಂಡ್ ತಂಡದ 8 ವಿಕೆಟ್‌ಗೆ 241ಕ್ಕೆ ಪ್ರತಿಯಾಗಿ ಇಯಾನ್ ಮೋರ್ಗಾನ್ ತಂಡವು 241 ರನ್ ಸ್ಕೋರ್ ಮಾಡಿತ್ತು. ಸೂಪರ್ ಓವರಿನಲ್ಲಿ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ಟ್ರೆಂಟ್ ಬೌಲ್ಟ್ ಓವರಿನಲ್ಲಿ 15 ರನ್ ಗಳಿಸಿದ್ದರು.

ಬಳಿಕ ಆರ್ಚರ್ ಬೌಲಿಂಗ್‌ಗೆ ಮಾರ್ಟಿನ್ ಗುಪ್ಟಿಲ್ ಮತ್ತು ಜಿಮ್ಮಿ ನೀಷಮ್ ಆಡಿ ಎರಡನೇ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದರು. ಅಂತಿಮ ಎಸೆತದಲ್ಲಿ 2 ರನ್ ಅಗತ್ಯವಿದ್ದು, ವಿಕೆಟ್ ಕೀಪರ್ ಜೋಸ್ ಬಟ್ಲರ್ ಮತ್ತು ಜೇಸನ್ ರಾಯ್ ಗುಪ್ಟಿಲ್ ಅವರನ್ನು ರನೌಟ್ ಮಾಡಿದ್ದರಿಂದ ಸೂಪರ್ ಓವರ್ ಟೈ ಆಗಿತ್ತು. ಆದರೆ ಟೈ ಬ್ರೇಕ್ ನಿಯಮದಡಿ ಇಂಗ್ಲೆಂಡ್ ಜಯಗಳಿಸಿತು. ಏಕೆಂದರೆ ಇಂಗ್ಲೆಂಡ್ ನ್ಯೂಜಿಲೆಂಡ್‌ಗಿಂತ ಹೆಚ್ಚು ಬೌಂಡರಿಗಳನ್ನು ಬಾರಿಸಿತ್ತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಹೆನ್ರಿ ನಿಕೋಲ್ಸ್ ಅವರ 55 ಮತ್ತು ಟಾಮ್ ಲಥಾಮ್ ಅವರ 47 ರನ್ ನೆರವಿನಿಂದ 8 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತು. ಕ್ರಿಸ್ ವೋಕ್ಸ್ 3 ವಿಕೆಟ್ ಮತ್ತು ಪ್ಲಂಕೆಟ್ 3 ವಿಕೆಟ್ ಕಬಳಿಸಿದರು. ನಂತರ ಬ್ಯಾಟಿಂಗ್ ಆಡಿದ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಅವರು ಅಮೋಘ 84 ರನ್ ಮತ್ತು ಜೋಸ್ ಬಟ್ಲರ್ ಅವರ 59 ರನ್ ಗಳಿಸಿದರು. ಒಂದು ಹಂತದಲ್ಲಿ ಇಂಗ್ಲೆಂಡ್ ಸೋಲಿನ ಸುಳಿಯಲ್ಲಿತ್ತು. ಆದರೆ ಕೊನೆಯಲ್ಲಿ ಬೆನ್ ಸ್ಟೋಕ್ಸ್ ಅವರ ಅಮೋಘ ಆಟದಿಂದ ಪಂದ್ಯ ಟೈ ಆಗಿತ್ತು. 

Recent Comments

Leave Comments

footer
Top