• 17 January 2019 20:35
Jai Kannada
Jai Kannada
Blog single photo
January 12, 2018

ಚೀಫ್ ಜಸ್ಟೀಸ್ ಬಗ್ಗೆ ನಾಲ್ವರು ಜಡ್ಜ್‌ಗಳ ಅಸಮಾಧಾನ  

 ನವದೆಹಲಿ: ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ, ಸುಪ್ರೀಂಕೋರ್ಟ್ ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯನ್ನು ಕರೆದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಬಗ್ಗೆ ಮತ್ತು ಅವರು ಕೇಸ್‌ಗಳನ್ನು ವಹಿಸುತ್ತಿರುವ ರೀತಿಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಂಗದಲ್ಲಿ ತಿಕ್ಕಾಟದ ಘಟನೆ ಸಂಭವಿಸಿದೆ.  ಎರಡು ತಿಂಗಳ ಹಿಂದೆ ನಾಲ್ವರು ನ್ಯಾಯಮೂರ್ತಿಗಳು ಸಿಜೆಐಗೆ ಬರೆದಿದ್ದ ಪತ್ರದಲ್ಲಿ ತಮಗಿಂತ ಕಿರಿಯ ನ್ಯಾಯಾಧೀಶರಿಗೆ ಪ್ರಮುಖ ಕೇಸ್‌ಗಳನ್ನು ಗೊತ್ತುಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.

ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿ.ಎಚ್. ಲೋಯಾ ಅವರ ನಿಗೂಢ ಸಾವಿನ ಪ್ರಕರಣವನ್ನು ವಹಿಸಿರುವ ರೀತಿ ಬಗ್ಗೆ ತಮಗೆ ಭಿನ್ನಾಭಿಪ್ರಾಯವಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದರು.

ಸಿಜೆಐ ಅವರಿಗೆ ಕೇಸ್‌ಗಳನ್ನು ವಿವಿಧ ಪೀಠಗಳಿಗೆ ಗೊತ್ತುಮಾಡುವುದಕ್ಕೆ ಅಧಿಕಾರ ಕೊಡುವುದು ಕೋರ್ಟ್ ವ್ಯವಹಾರದ ಶಿಸ್ತಿನ ಮತ್ತು ದಕ್ಷ ನಿರ್ವಹಣೆಗೆ ಹೊರತು ಮೇಲಿನ ಅಧಿಕಾರಿಯೆನ್ನುವುದಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. 
 ನ್ಯಾಯಾಂಗ ನಿಷ್ಪಕ್ಷಪಾತವಾಗಿಲ್ಲದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲವಾದ್ದರಿಂದ  ತಾವು ಮಾತನಾಡುತ್ತಿರುವುದಾಗಿ ನ್ಯಾ. ಚಲಮೇಶ್ವರ್, ಗೊಗೊಯ್, ಲೋಕುರ್, ಕುರಿಯನ್ ಜೋಸೆಫ್ ತಿಳಿಸಿದರು.
ನ್ಯಾಯಾಂಗದಲ್ಲಿ ಕೆಲವು ಅನಿರ್ದಿಷ್ಟ ಅಕ್ರಮಗಳ ಬಗ್ಗೆ ಗಮನಸೆಳೆಯಲು ಬಯಸುವುದಾಗಿ ಅವರು ಹೇಳಿದ್ದು, ಸಿಜೆಐ ಮಿಶ್ರಾ ಈ ಪರಿಸ್ಥಿತಿಯ ನಿವಾರಣೆಗೆ ಏನನ್ನೂ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ನ್ಯಾ. ಮಿಶ್ರಾ ಅವರನ್ನು ಸಿಜೆಐ ಹುದ್ದೆಯಿಂದ ತೆಗೆಯಬೇಕೆ ಎಂಬ ಪ್ರಶ್ನೆಗೆ ಅವರ ವಿರುದ್ಧ ದೋಷಾರೋಪ ಹೊರಿಸುವುದನ್ನು ರಾಷ್ಟ್ರವೇ ನಿರ್ಧರಿಸಲಿ ಎಂದು ತಿಳಿಸಿದರು.

ಸುಪ್ರೀಂನ ಕೆಲವು ತೀರ್ಪುಗಳು ನ್ಯಾಯದಾನ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನಾಲ್ವರು ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹೈಕೋರ್ಟ್ ಸ್ವಾತಂತ್ರ್ಯಕ್ಕೆ ಕೆಲವು ಆದೇಶಗಳು ನಕಾರಾತ್ಮಕ ಪರಿಣಾಮ ಬೀರಿವೆ.  ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ  ಕರೆದ ಬೆನ್ನಲ್ಲೇ ಕಾನೂನು ಸಚಿವರ ಜತೆ ಪ್ರಧಾನಿ ಮೋದಿ ತುರ್ತು ಸಭೆ ನಡೆಸಿದ್ದಾರೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈ ಸಭೆಯಲ್ಲಿ ಹಾಜರಿದ್ದರು.
 ಇವೆಲ್ಲವನ್ನೂ ಗಮನಿಸಿದರೆ ನ್ಯಾಯಾಂಗ ವ್ಯವಸ್ಥೆಯಲ್ಲೂ ಕೆಲವು ಲೋಪದೋಷಗಳಿವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಲ್ಲದೇ ನ್ಯಾ, ಲೋಯಾ ಅವರ ನಿಗೂಢ ಸಾವಿನ ಪ್ರಕರಣದ ಮರುವಿಚಾರಣೆ ನಡೆಸುವ ಸಾಧ್ಯತೆಯೂ ದಟ್ಟವಾಗಿದೆ. 
 

Recent Comments

Leave Comments

footer
Top