• 19 April 2019 20:00
Jai Kannada
Jai Kannada
Blog single photo
April 12, 2019

ಚುನಾವಣೆ ಬಾಂಡ್‌ನಲ್ಲಿ ಬಿಜೆಪಿಗೆ 210 ಕೋಟಿ, ಉಳಿದವರಿಗೆ ಬರೀ 11 ಕೋಟಿ: ಇಸಿ 

 ನವದೆಹಲಿ:  2016-17 ಮತ್ತು 2017-18ರಲ್ಲಿ ಕ್ರಮವಾಗಿ ಬಿಜೆಪಿ ದೇಣಿಗೆಯ ರೂಪದಲ್ಲಿ 997 ಕೋಟಿ ಮತ್ತು 990 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಸ್ವೀಕರಿಸಿದ ದೇಣಿಗೆಗಿಂತ ಇದು ಐದು ಪಟ್ಟು ಹೆಚ್ಚು ಎಂದು ಚುನಾವಣೆ ಆಯೋಗ ಗುರುವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಚುನಾವಣೆ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಸಿಜೆ ರಂಜನ್ ಗೊಗೋಯ್ ಮತ್ತು ನ್ಯಾ.ದೀಪಕ್ ಗುಪ್ತಾ ಮತ್ತು ನ್ಯಾ. ಸಂಜೀವ್ ಖನ್ನಾ ಪೀಠಕ್ಕೆ ಈ ಮಾಹಿತಿ ನೀಡಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಘಟನೆ ಸಲ್ಲಿಸಿದ ಅರ್ಜಿ ವಿಚಾರಣೆಯಲ್ಲಿ ಮೇಲಿನ ಮಾಹಿತಿ ನೀಡಿದರು. ಚುನಾವಣೆ ಬಾಂಡ್‌ಗಳ ಮೂಲಕ ಸಲ್ಲಿಸುವ ಅಜ್ಞಾತ ದೇಣಿಗೆಗಳಲ್ಲಿ ಪಾರದರ್ಶಕತೆ ಇರಬೇಕೆಂದು ಕೋರಿ ಈ ಸಂಘಟನೆ ಅರ್ಜಿ ಸಲ್ಲಿಸಿತ್ತು. ಪ್ರಸಕ್ತ ಇದು ಭ್ರಷ್ಟಾಚಾರಕ್ಕೆ ಎಡೆಯಾಗುತ್ತಿದ್ದು, ಕಪ್ಪು ಹಣವನ್ನು ಸೃಷ್ಟಿಸುತ್ತಿದೆ ಎಂದು ಅದು ಆರೋಪಿಸಿತ್ತು.

 ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ವಾದಿಸುತ್ತಾ ಚುನಾವಣೆ ಬಾಂಡ್‌ಗಳು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕೈಗಾರಿಕೋದ್ಯಮಿಗಳ ಅನುಕೂಲಕ್ಕಾಗಿ ರೂಪಿಸಲಾಗಿದೆ ಎಂದು ವಾದಿಸಿದರು. ಇವರು ಧಾರಾಳವಾಗಿ ಮತ್ತು ಅಜ್ಞಾತವಾಗಿ ದೇಣಿಗೆ ನೀಡಿ ಅದಕ್ಕೆ ಆಡಳಿತ ಪಕ್ಷದಿಂದ ಪ್ರತಿಫಲ ಅಪೇಕ್ಷಿಸುತ್ತಾರೆ. ಬಿಜೆಪಿ ಇಂತಹ 95% ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಹೇಳಿದರು. 
 ಆದಾಗ್ಯೂ, ದ್ವಿವೇದಿ ನ್ಯಾಯಪೀಠಕ್ಕೆ 2 ಪುಟಗಳ ಟಿಪ್ಪಣಿಯನ್ನು ನೀಡಿ ಬಿಜೆಪಿ ಗರಿಷ್ಠ ದೇಣಿಗೆಗಳನ್ನು ಸ್ವೀಕರಿಸಿದ್ದಕ್ಕೆ ಪುರಾವೆ ಒದಗಿಸಿದರು. 2017-18ರಲ್ಲಿ ಬಿಜೆಪಿಗೆ 222 ಕೋಟಿ ರೂ. ಮೌಲ್ಯದ 520 ಬಾಂಡ್‌ಗಳನ್ನು ಎಸ್ಬಿಐ ಬ್ಯಾಂಕ್ ವಿತರಣೆ ಮಾಡಿದ್ದನ್ನು ಉಲ್ಲೇಖಿಸಿದರು.  ಚುನಾವಣೆ ಬಾಂಡ್ ಮೂಲಕ 210 ಕೋಟಿ ರೂ. ಸ್ವೀಕರಿಸಿದ್ದನ್ನು ಬಿಜೆಪಿ ತೋರಿಸಿದೆ. ಉಳಿದೆಲ್ಲಾ ಪಕ್ಷಗಳು ಚುನಾವಣೆ ಬಾಂಡ್ ಮೂಲಕ ಸ್ವೀಕರಿಸಿದ್ದು ಕೇವಲ 11 ಕೋಟಿ ರೂ. ಎಂದು ದ್ವಿವೇದಿ ಹೇಳಿದರು.


 ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅದನ್ನು ಅಲ್ಲಗಳೆಯುತ್ತಾ, ಭೂಷಣ್ ಗಾಳಿ ಪಟ ಹಾರಿಸುತ್ತಿದ್ದು, ಈ ಮಾಹಿತಿ ಆಧಾರವನ್ನು ಪ್ರಶ್ನಿಸಿದರು.
 ಈ ಹಂತದಲ್ಲಿ ಚುನಾವಣೆ ಬಾಂಡ್ ಕುರಿತಂತೆ  ಸುಪ್ರೀಂಕೋರ್ಟ್ ಹಸ್ತಕ್ಷೇಪದ ವಿರುದ್ಧ ವಾದಮಂಡಿಸಿದ ಎಜಿ ಚುನಾವಣೆ ರಾಜಕೀಯದಲ್ಲಿ ಕಪ್ಪು ಹಣದ ಪಾತ್ರವನ್ನು ಮೊಟಕು ಮಾಡಲು ನೀತಿ ನಿರ್ಧಾರವಾಗಿ ಸರ್ಕಾರ ರೂಪಿಸಿದ ಸಾಧನ ಎಂದು ಹೇಳಿದರು. ಕೆಲವು ಸಮಯ ಇದೇ ವ್ಯವಸ್ಥೆ ಮುಂದುವರಿಯಲು ಬಿಟ್ಟು, ಅಧಿಕಾರಕ್ಕೆ ಬಂದವರು ಈ ಯೋಜನೆ ಪುನರ್ಪರಿಶೀಲನೆ ಮಾಡಿ ಬದಲಾವಣೆಗಳನ್ನು ತರಲಿ ಎಂದು ಎಜಿ ಹೇಳಿದರು.
.............

Recent Comments

Leave Comments

footer
Top