• 19 November 2018 06:21
Jai Kannada
Jai Kannada
Blog single photo
January 02, 2018

ಹಾಸಿಗೆ ಹಿಡಿದಿದ್ದರೂ ಶಾಲೆ ನಿರ್ವಹಿಸುವ ಪ್ರಾಂಶುಪಾಲೆ

 ಉತ್ತರಪ್ರದೇಶದ ಸಹರಾನ್‌ಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮಕ್ಕಳು ಸ್ಫೂರ್ತಿ ಪಡೆಯಲು ಹೊರಗೆಲ್ಲೂ ಹುಡುಕಬೇಕಿಲ್ಲ. ಅವರ ಶಾಲೆಯ ಪ್ರಿನ್ಸಿ‌ಪಾಲ್ ಮೇಡಮ್ ಅವರನ್ನು ನೋಡಿದರೆ ಎಂತಹ ಮಕ್ಕಳಿಗೂ ಸ್ಫೂರ್ತಿ ಉಕ್ಕಿ ಹರಿಯುತ್ತದೆ.

ಶಾಲೆಯ ಪ್ರಾಂಶುಪಾಲೆ ಉಮಾ ಶರ್ಮಾ ಕಳೆದ 10 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಆದರೆ ಹಾಸಿಗೆಯ ಮೇಲೆ ಮಲಗಿಕೊಂಡೇ ತಮ್ಮ ಶಾಲೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಅವರ ಮುಖ ಮತ್ತು ಕೈಗಳನ್ನು ಹೊರತುಪಡಿಸಿ ಇಡೀ ದೇಹ ಪಾರ್ಶ್ವವಾಯು ಪೀಡಿತವಾಗಿದೆ. ಆದರೆ 64 ವರ್ಷದ ವಯಸ್ಸಿನ ಈ ಮಹಿಳೆಯ ಕರ್ತವ್ಯನಿಷ್ಠೆಗೆ ಇಂತಹ ನ್ಯೂನತೆಗಳು ತೊಡಕಾಗಿಲ್ಲ.

ಅವರು ಶಾಲೆಯಲ್ಲಿ ಪ್ರತಿದಿನವೂ ತಪ್ಪದೇ ಹಾಜರಾಗಿರುತ್ತಾರೆ. ಅಂದರೆ ತಂತ್ರಜ್ಞಾನದ ಮುನ್ನಡೆ ಅವರಿಗೆ ನೆರವಾಗಿದೆ. ತಮ್ಮ ಟ್ಯಾಬ್ಲೆಟ್ ನೆರವಿನಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿಕೊಂಡೇ ಸ್ಟಾಫ್ ರೂಂ, ತರಗತಿಗಳು ಮತ್ತು ಶಾಲೆ ಮೈದಾನದ ನಿಗಾ ವಹಿಸುತ್ತಾರೆ.

 ಶಾಲೆಯಿಡೀ ಅಳವಡಿಸಿದ ಸಿಸಿಟಿವಿಗಳಿಂದ ಅವರು ಎಲ್ಲಾ ಕಡೆಯೂ ಗಮನವಹಿಸುತ್ತಾರೆ.  ಆದ್ದರಿಂದ ಅವರ ಸೋಲರಿಯದ ಸ್ವಭಾವವು ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸ್ಪೂರ್ತಿದಾಯಕವಾಗಿದೆ.

  ಉಮಾ ಶರ್ಮಾ ಪತಿ 27 ವರ್ಷಗಳ ಹಿಂದೆ ಗತಿಸಿದ ಬಳಿಕ 1992ರಲ್ಲಿ ದುರ್ಬಲವರ್ಗದವರಿಗಾಗಿ ಶಾಲೆಯನ್ನು ಉಮಾ ಶರ್ಮಾ ಆರಂಭಿಸಿದರು. ಆದರೆ 2001ರಲ್ಲಿ ಮತ್ತೊಂದು ದುರಂತ ಅವರ ಕುಟುಂಬಕ್ಕೆ ಅಪ್ಪಳಿಸಿತ್ತು. ಅವರ 21 ವರ್ಷ ವಯಸ್ಸಿನ ಪುತ್ರನ ದಾರುಣ ಸಾವು. 2010ರಲ್ಲಿ ಅವರ ಪುತ್ರಿ ರಿಚಾ ಅಕಾಲಿಕ ನಿಧನವಪ್ಪಿದಳು. ಮೇಲಿಂದ ಮೇಲೆ ಎರಗಿದ ಆಘಾತ ಸಹಿಸಿಕೊಂಡ ದಿಟ್ಟ ಮಹಿಳೆ ತಮ್ಮ ಶಾಲೆ ಮತ್ತು ಮಕ್ಕಳ ಮೇಲೆ ಗಮನ ಕೇಂದ್ರೀಕರಿಸಿ ಕಹಿ ಘಟನೆಗಳನ್ನು ಮರೆತಿದ್ದಾರೆ. ಶಾಲೆಯನ್ನು  ಹಾಸಿಗೆಯ ಮೇಲೆ ಮಲಗಿಕೊಂಡೇ ಸುಸೂತ್ರವಾಗಿ ನಡೆಸಿಕೊಂಡು ಹೋಗಿದ್ದಾರೆ. 

..............................

Recent Comments

Leave Comments

footer
Top