• 19 March 2019 06:05
Jai Kannada
Jai Kannada
Blog single photo
February 25, 2019

ಪ್ರಕೃತಿ ವಿಕೋಪ ಅಭೇದ್ಯ, ಆದರೆ ಕೃತಕ ವಿಕೋಪ ತಡೆಯಲಾಗದ್ದೇ?

ಪ್ರಕೃತಿ ವಿಕೋಪದಿಂದ ಉಂಟಾಗುವ ಅನಾಹುತಗಳ ಬಗ್ಗೆ ಮಾನವರಿಗೆ ಅರಿವು ಇದ್ದೇ ಇದೆ. ಆದರೆ ನಿರ್ಲಕ್ಷ್ಯದಿಂದಲೋ, ಬೇಜವಾಬ್ದಾರಿತನದಿಂದಲೋ ಮಾನವ ಮುಂಜಾಗ್ರತಾ ಕ್ರಮಗಳನ್ನು ವಹಿಸದೇ ಕಡೆಗಣಿಸುತ್ತಲ್ಲೇ ಬಂದಿದ್ದಾನೆ. ಹೀಗಾಗಿ ಭೂಕಂಪ, ಸುನಾಮಿ, ಚಳಿ, ಪ್ರವಾಹಗಳಿಗೆ ನೂರಾರು ಜನರು ಪ್ರಾಣ ತೆರುತ್ತಿದ್ದಾರೆ. ಇನ್ನೂ ಮುಂದೆಯೂ ತೆರುತ್ತಾರೆ. ಪ್ರಕೃತಿ ವಿಕೋಪವನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.

ಆದರೆ ಕೃತಕ ವಿಕೋಪಗಳು ಎನ್ನುವುದು ಕೂಡ ಇದೆ.ಅಂದರೆ ಇವು ಮಾನವ ನಿರ್ಮಿತ ವಿಕೋಪಗಳು. ಉದಾಹರಣೆಗೆ ಬೆಳೆದುನಿಂತ, ನೂರಾರು ಪ್ರಾಣಿಪಕ್ಷಿಗಳಿಗೆ ಆಶ್ರಯತಾಣವಾದ ಕಾಡಿಗೆ ಬೆಂಕಿ ಹಚ್ಚಿ ಕಾಡ್ಗಿಚ್ಚು ಹರಡುವಂತೆ ಮಾಡುವುದು. ಕೇವಲ ಒಂದು ಬೆಂಕಿಯ ಕಿಡಿ ಸಾವಿರಾರು ಎಕರೆ ಕಾಡಿನುದ್ದಕ್ಕೂ ಚಾಚಿ ಅಗ್ನಿಯ ರುದ್ರನರ್ತನ ಮಾಡಿದರೆ ಅದಕ್ಕೆ ಯಾರು ಹೊಣೆಗಾರರು? ಇಂತಹ ತಿಳಿಗೇಡಿ ಕೃತ್ಯವೆಸಗುವ ಜನರು ಯೋಚಿಸಬೇಕು. ತನ್ನ ಒಂದು ಸಣ್ಣ ತಪ್ಪಿನಿಂದಾಗಿ ನೂರಾರು ಮರಗಳು, ಗಿಡಗಳು, ಪ್ರಾಣಿಪಕ್ಷಿಗಳು ತಿನ್ನಲು ಆಹಾರ ಸಿಗದೇ, ಉಳಿಯಲು ಜಾಗ ಸಿಗದೇ ಪರಿತಪಿಸುವಂತಾಗುತ್ತದೆಂದು ತಿಳಿಯಬೇಕು. ಪ್ರಕೃತ್ತಿದತ್ತ ಸೌಂದರ್ಯವಾದ ಕಾಡು ಇದ್ದರೇನೇ ನಾಡು ಸುಭಿಕ್ಷವಾಗಿರುತ್ತದೆ. ಬಂಡೀಪುರದಲ್ಲಿ ವ್ಯಾಪಿಸಿರುವ ಕಾಡ್ಗಿಚ್ಚು ಪ್ರಾಣಿ, ಪಕ್ಷಿಗಳನ್ನು ಅಪೋಶನ ತೆಗೆದುಕೊಂಡ ಎದುರಿಗೆ ಬಂದ ಎಲ್ಲವನ್ನೂ ನುಂಗುತ್ತಾ ಸಾಗಿದೆ. ಇದಕ್ಕೆಲ್ಲಾ ಮುಂಜಾಗ್ರತಾ ಕ್ರಮವಹಿಸಿದ್ದರೆ ಇಷ್ಟೆಲ್ಲಾ ಅನಾಹುತ ಘಟಿಸುತ್ತಿರಲಿಲ್ಲ. ಮಾನವ ನಿರ್ಮಿತ ವಿಕೋಪಗಳು ಘಟಿಸದಂತೆ  ಇಲಾಖೆಗಳು ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

 ಇನ್ನು ನದಿಗಳಲ್ಲಿ ಸತ್ತ ಪ್ರಾಣಿಗಳನ್ನು ಎಸೆಯುವ ಪರಿಪಾಠ ನದಿಯ ದಡದಲ್ಲಿ ವಾಸಿಸುವ ಜನರಲ್ಲಿದೆ. ಸತ್ತ ಪ್ರಾಣಿಗಳನ್ನು ಇನ್ನೆಲ್ಲಿ ಎಸೆಯುವುದು ಎಂಬ ಧೋರಣೆ ಅವರದ್ದಾಗಿರುತ್ತದೆ. ಸತ್ತ ಪ್ರಾಣಿಗಳಿಂದ ಹೊರಬರುವ ಬ್ಯಾಕ್ಟೀರಿಯಾಗಳು ನೀರನ್ನು ಕಲುಷಿತಗೊಳಿಸುತ್ತದೆಂದು ತಿಳಿದಿರಬೇಕು. ಒಂದು ಕಾಲದಲ್ಲಿ ಗಂಗಾನದಿ ಪವಿತ್ರ ಎನಿಸಿಕೊಂಡು ಪೂಜೆಗೆ ಅರ್ಹವಾಗಿತ್ತು. ಆದರೆ ಈಗ ಮಾನವ, ಪ್ರಾಣಿಗಳ ಹೆಣಗಳು ತೇಲುವ ಗಂಗಾನದಿ ಪೂಜಿಸಲು ಯೋಗ್ಯಳೇ ಎಂಬ ಪ್ರಶ್ನೆ ಕೇಳುವಂತಾಗಿದೆ

ಇನ್ನು ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಕೋಟ್ಯಂತರ ರೂ. ವೆಚ್ಚ ಮಾಡಿದರೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಪ್ರಕೃತಿಯನ್ನು ಹಾಳು ಮಾಡುವ ಮಾನವ ಅದಕ್ಕೇ ತಾನೇ ಬೆಲೆಯನ್ನು ತೆರೆಬೇಕಾಗಿದೆ. ಇನ್ನು ಮಾನವ ವಾತಾವರಣಕ್ಕೆ ತನ್ನ ವಾಹನಗಳ ಮೂಲಕ ಬಿಡುವ ಕಲುಷಿತ ಅನಿಲಗಳು. ವಿಷಪೂರಿತ ಅನಿಲಗಳು ಗಾಳಿಗೆ ಸೇರಿ ಉಸಿರಾಡಲು ಆಗದಂಥ ಸಮಸ್ಯೆಗೆ ನಮ್ಮನ್ನು ನಾವು ಒಡ್ಡಿಕೊಂಡಿದ್ದೇವೆ. ಇದೆಲ್ಲಾ ಸಮಸ್ಯೆಗಳ ನಿವಾರಣೆಗೆ ಮಾನವನೇ ಪರಿಹಾರ ಹುಡುಕಿಕೊಂಡರೆ ಮುಂದಿನ ಪೀಳಿಗೆ ಕ್ಷೇಮಕರವಾಗಿರುತ್ತದೆ. ವಾಯುಮಾಲಿನ್ಯ ಜಲಮಾಲಿನ್ಯ ನಿವಾರಣೆಗೆ ಕೋಟ್ಯಂತರ ರೂ. ವೆಚ್ಚಮಾಡುವುದೂ ತಗ್ಗುತ್ತದೆ. 
 

Recent Comments

Leave Comments

footer
Top