Jai Kannada
Jai Kannada
Blog single photo
January 12, 2019

 ನಾಪತ್ತೆಯಾದ ಮೀನುಗಾರರು: ಪಾಕ್ ಭಯೋತ್ಪಾದಕರ ಕೈವಾಡವೇ?  

ಉಡುಪಿ:  29 ದಿನಗಳು ಕಳೆದರೂ ಇನ್ನೂ ಮೀನುಗಾರರು ಪತ್ತೆಯಾಗದಿರುವುದು ಕುಟುಂಬಸ್ಥರ ಆತಂಕ ಹೆಚ್ಚಿದೆ. ತಮ್ಮವರು ಸಿಗಲಿ ಎಂದು ದೇವರ ಮೊರೆ ಹೋಗಿದ್ದಾರೆ. ಮಲ್ಪೆ ಬೀಚ್ ಬಳಿ ತಮ್ಮ ಆರಾಧ್ಯದೈವ ಮಾಲ್ತಿದೇವಿಗೆ ಸಂಬಂಧಿಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.  ಎಷ್ಟು ಹುಡುಕಾಟ ನಡೆಸಿದರೂ ಮೀನುಗಾರರು ಸಿಕ್ಕಿಲ್ಲ. ಮಹಾರಾಷ್ಟ್ರ ಕಡಲತೀರದಲ್ಲೂ ಹುಡುಕಾಟ ನಡೆಸಲಾಗಿದೆ.
 
ಏತನ್ಮಧ್ಯೆ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಭಯೋತ್ಪಾದಕರನ್ನು ಭಾರತದ ಗಡಿಯೊಳಕ್ಕೆ ನುಸುಳಿಸಲು ಕರ್ನಾಟಕ ಕರಾವಳಿ ತೀರವನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಮಾಹಿತಿ ಬಂದಿರುವುದು ಎದೆ ಡವಗುಡುವಂತೆ ಮಾಡಿದೆ.

ಭಾರತದ ವಿರುದ್ಧ ಸಮುಂದರಿ ಜಿಹಾದ್ ನಡೆಸಲು ಸಂಚು ರೂಪಿಸಿರುವ ಭಯೋತ್ಪಾದಕರು ಆಳ ಸಮುದ್ರದಲ್ಲಿ ಈಜುಗಾರಿಕೆಗೆ ಮತ್ತು ಅನೇಕ ದಿನಗಳವರೆಗೆ ಬದುಕುಳಿಯುವ ತರಬೇತಿ ಪಡೆದಿದ್ದಾರೆಂದು ಹೇಳಲಾಗುತ್ತಿದೆ.  ಸುಮಾರು 12ಕ್ಕೂ ಹೆಚ್ಚು ಭಯೋತ್ಪಾದಕರ ತಂಡ ಪಾಕಿಸ್ತಾನದ ತೀರವನ್ನು ಬಿಟ್ಟು ಹೊರಟಿದ್ದಾರೆಂದು ಗುಪ್ತಚರ ಇಲಾಖೆ ಗೃಹ ಇಲಾಖೆಗೆ ಈಗಾಗಲೇ ಮಾಹಿತಿ ನೀಡಿದ್ದು, ನೌಕಾದಳಕ್ಕೆ ಮತ್ತು ಕರಾವಳಿ ಭದ್ರತಾ ಪಡೆಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. 

ಭಯೋತ್ಪಾದಕರು ಕೇರಳದಲ್ಲಿ ಬಹುಶಃ ಸ್ಲೀಪರ್ ಸೆಲ್ ಹೊಂದಿರುವುದರಿಂದ ಅದಕ್ಕೆ ಸಮೀಪದ ಕರ್ನಾಟಕ ತೀರದ ಮೂಲಕ ಭಾರತಕ್ಕೆ ನುಸುಳಲು ಸಂಚು ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.

 ಭಯೋತ್ಪಾದಕರ ಕೈವಾಡವೇ?

ದೋಣಿ, ಟ್ಯಾಂಕರ್‌ಗಳನ್ನು ಬಲಾತ್ಕಾರದಿಂದ ಅಪಹರಿಸಿ ಅವುಗಳನ್ನು ಭಾರತಕ್ಕೆ ನುಸುಳಲು ಬಳಸಿಕೊಂಡು ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿದ್ವಂಸಕಾರಿ ಚಟುವಟಿಕೆ ನಡೆಸುವುದು ಭಯೋತ್ಪಾದಕರ ಸಂಚಿರಬಹುದೆಂದು ಭಾವಿಸಲಾಗಿದೆ.
ಏತನ್ಮಧ್ಯೆ 7 ಮೀನುಗಾರರಿದ್ದ ಸುವರ್ಣ ತ್ರಿಭುಜ ಮೀನುಗಾರಿಕೆ ದೋಣಿ ಮಲ್ಪೆಯಿಂದ ನಾಪತ್ತೆಯಾದ ಪ್ರಕರಣವು ಗುಪ್ತಚರ ಇಲಾಖೆಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಬಹುಶಃ ಅವರು ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿರಬಹುದೇ ಎಂಬ ಶಂಕೆಯು ಬಲವಾಗಿ ಕಾಡುತ್ತಿದೆ. 

 ದೋಣಿ ಮತ್ತು ಮೀನುಗಾರರು ಎಲ್ಲಿದ್ದಾರೆಂಬ ಬಗ್ಗೆ ಯಾವುದೇ ಸ್ಪಷ್ಟ  ಸುಳಿವುಗಳು ಸಿಕ್ಕಿಲ್ಲ ಮತ್ತು ಊಹಾಪೋಹದ ವರದಿಗಳನ್ನು ಹರಿಯಬಿಡಲಾಗುತ್ತಿದೆ. ಇದರಿಂದಾಗಿ ದೋಣಿಯನ್ನು ಅಪಹರಿಸಿರುವ ಶಂಕೆ ಆವರಿಸಿದ್ದು, ಗೃಹ ಇಲಾಖೆಯು ಗೋವಾ, ಮಹಾರಾಷ್ಟ್ರದ ಪೊಲೀಸ್ ಸಿಬ್ಬಂದಿ ಮತ್ತು ನೌಕಾದಳಕ್ಕೆ ಎಚ್ಚರವಾಗಿರುವಂತೆ ಸೂಚಿಸಿದೆ. ಗುಜರಾತ್ ಮತ್ತು ನೆರೆಯ ರಾಜ್ಯಗಳು ಕೂಡ ಕರಾವಳಿಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮತ್ತು ಭದ್ರತೆ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.  

Recent Comments

Leave Comments

footer
Top