• 17 December 2018 01:42
Jai Kannada
Jai Kannada
Blog single photo
November 25, 2018

ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರ ಹೆಲಿಕಾಪ್ಟರ್‌ನಲ್ಲಿ ಮಂಡ್ಯಕ್ಕೆ ರವಾನೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಛಾಪನ್ನು ಒತ್ತಿದ , ರಾಜಕಾರಣದಲ್ಲಿ, ಚಿತ್ರರಂಗದಲ್ಲಿ ಸ್ನೇಹಜೀವಿಯಾಗಿ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನದ ಬಳಿಕ ಎಚ್‍‌ಎಎಲ್ ವಾಯು ನೆಲೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಲಿಕಾಪ್ಟ‌ರ್‌ನಲ್ಲಿ ಮಂಡ್ಯಕ್ಕೆ ಒಯ್ಯಲಾಗುತ್ತಿದೆ. ಮಂಡ್ಯದಲ್ಲಿ ನಾಳೆ ಅಂಬರೀಶ್ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಕಂಠೀರವ ಸ್ಟೇಡಿಯಂನಲ್ಲಿ ಹೆಲಿಕಾಫ್ಟರ್ ಟೇಕ್ ಆಫ್ ಮಾಡಲು ವಾಯುಪಡೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರಿಂದ ಆಂಬ್ಯೂಲೆನ್ಸ್ ಮೂಲಕ ಪಾರ್ಥಿವ ಶರೀರವನ್ನು ಎಚ್‌ಎಎಲ್‌ಗೆ ತರಲಾಯಿತು. ಅಂಬರೀಷ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳ ದಂಡೇ ನೆರೆದಿದ್ದರಿಂದ ಕೆಲವು ಕಾಲ ನೂಕುನುಗ್ಗಲು ಉಂಟಾಯಿತು. ಅಂಬರೀಷ್ ಅವರ ಪಾರ್ಥಿವ ಶರೀರ ಒಂದು ಹೆಲಿಕಾಪ್ಟರ್‌‌ನಲ್ಲಿ ಹಾಗೂ ಮತ್ತೊಂದು ಐಎಎಫ್ ಹೆಲಿಕಾಪ್ಟರ್‌ನಲ್ಲಿ ಅವರ ಪತ್ನಿ ಸುಮಲತಾ, ಪುತ್ರ, ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಹೊರಟರು. ಅಂಬರೀಷ್ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಬಳಿಕ ರಾಜಕಾರಣದಲ್ಲಿ ಕೇಂದ್ರ ಸಚಿವರಾಗಿ, ರಾಜ್ಯದ ಸಚಿವರಾಗಿ ಸೇವೆ ಸಲ್ಲಿಸಿದರು. ಏತನ್ಮಧ್ಯೆ ಮಂಡ್ಯದ ವಿಶ್ವೇಶ್ವರಯ್ಯ ಮೈದಾನದಲ್ಲಿ ನಾಳೆ ಬೆಳಿಗ್ಗೆ 8 ಗಂಟೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ನೆರವೇರಿಸಲಾಗುತ್ತದೆ.

ಅಂಬರೀಷ್ ನಡೆದು ಬಂದ ಹಾದಿ

ಅಂಬರೀಷ್ ಪಿಟೀಲು ಚೌಡಯ್ಯನವರ ಮೊಮ್ಮಗ. ಅಂಬರೀಷ್ ಹುಟ್ಟಿದ್ದು 1952ರ ಮೇ 29ರಂದು ಮಂಡ್ಯದ ದೊಡ್ಡರಸಿನಕೆರೆ ಗ್ರಾಮದಲ್ಲಿ. ಅವರಿಗೆ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಎಂಬ ಹೆಸರಿತ್ತು. ಪುಟ್ಟಣಕಣಗಾಲ್ ನಿರ್ದೇಶನದ ನಾಗರಹೂವು ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದರು. ಸುಮಾರು 200 ಚಿತ್ರಗಳಲ್ಲಿ ಯಶಸ್ವಿ ವೃತ್ತಿಜೀವನ ನಡೆಸಿದ ಅಂಬರೀಶ್ ಅವರಿಗೆ ಗೌರವಗಳು, ಪ್ರಶಸ್ತಿಗಳು ಸಾಲು ಸಾಲು ಸಿಕ್ಕಿದವು.

1994ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಅಂಬರೀಶ್ 14ನೇ ಲೋಕಸಭೆಯಲ್ಲಿ ರಾಜ್ಯ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಮನಮೋಹನ್ ಸಿಂಗ್ ಸರ್ಕಾರದಲ್ಲಿದ್ದರು. ಆದರೆ ಕಾವೇರಿ ವಿವಾದ ನ್ಯಾಯಾಧೀಕರಣದ ಜತೆ ಅಸಮಾಧಾನದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ ಅಂಬರೀಶ್ ಸಿದ್ದರಾಮಯ್ಯ ಸರ್ಕಾರದಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಇತ್ತೀಚೆಗೆ ಅಂಬರೀಶ್ ಅವರ ಆರೋಗ್ಯ ಸರಿಯಿಲ್ಲದೇ ವಿಧಾನಸಭೆ ಚುನಾವಣೆಗೆ ಕೂಡ ಕಣಕ್ಕಿಳಿಯದೇ ತಟಸ್ಥರಾಗಿ ಉಳಿದಿದ್ದರು. ಆದರೆ ವಿಧಿ ಇಷ್ಟು ಬೇಗ ಅಂಬರೀಶಣ್ಣನನ್ನು ಕರೆದುಕೊಳ್ಳುತ್ತದೆಂದು ಅಭಿಮಾನಿಗಳು ಎಣಿಸಿರಲಿಲ್ಲ. ಅಂಬರೀಷ್ ನಿಧನಕ್ಕೆ ಅವರ ಅಭಿಮಾನಿ ಬಳಗ ಕಂಠೀರವ ಕ್ರೀಡಾಂಗಣದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂತು.

Recent Comments

Leave Comments

footer
Top