• 19 November 2018 06:34
Jai Kannada
Jai Kannada
Blog single photo
October 14, 2018

ಸಚಿವ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ರಾಜೀನಾಮೆಗೆ ಒತ್ತಡ 

ನವದೆಹಲಿ: ಮಹಿಳೆಯರ ವಿರುದ್ಧ ಲೈಂಗಿಕ ಕಿರುಕುಳ ಬಯಲುಮಾಡುವ ಮೀ ಟೂ ಚಳವಳಿಯಲ್ಲಿ ಅನೇಕ ಗಣ್ಯವ್ಯಕ್ತಿಗಳಿಂದ ಲೈಂಗಿಕ ಕಿರುಕುಳದ ಕತೆಗಳು ಹೊರಬೀಳುತ್ತಿದ್ದಂತೆ, ಕಳೆದ ಕೆಲವು ದಿನಗಳಿಂದ ಅನೇಕ ಮಹಿಳೆಯರಿಂದ ಮೀ ಟೂ ಆರೋಪಗಳಿಗೆ ಗುರಿಯಾಗಿ ರಾಜೀನಾಮೆಗೆ ಕರೆಗಳು ಬರುತ್ತಿರುವ ನಡುವೆ  ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಇಂದು ಬೆಳಿಗ್ಗೆ ದೆಹಲಿಗೆ ಆಗಮಿಸಿದರು.

ಅಕ್ಬರ್ ಅವರನ್ನು ಸಚಿವರನ್ನಾಗಿ ಉಳಿಸಿಕೊಳ್ಳಬೇಕೇ ಅಥವಾ ಅವರ ವಜಾ ಬೇಡಿಕೆಯನ್ನು ಒಪ್ಪಿಕೊಳ್ಳಬೇಕೇ ಎನ್ನುವುದನ್ನು ನರೇಂದ್ರ ಮೋದಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. 

 ಸಾಮಾಜಿಕ ಜಾಲ ತಾಣದ ಮೀ ಟೂ ಚಳವಳಿಯಲ್ಲಿ ಅಕ್ಬರ್ ಹೆಸರು ಕೂಡ ಕೇಳಿಬಂದಾಗ ಅವರು ನೈಜೀರಿಯಾದಲ್ಲಿದ್ದರು. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಹುತೇಕ ಮಹಿಳೆಯರು ಪತ್ರಕರ್ತೆಯರಾಗಿದ್ದು, ಅಕ್ಬರ್ ಸಂಪಾದಕರಾಗಿದ್ದಾಗ ಅವರ ಜತೆ ಕೆಲಸ ಮಾಡುತ್ತಿದ್ದರು.

ಅಕ್ಬರ್ ವಿರುದ್ಧ ಆರೋಪಗಳು ಗಂಭೀರವಾಗಿದ್ದು, ಅವರ ಸಚಿವ ಸಂಪುಟ ಸ್ಥಾನ ಉಳಿಯುವ ಬಗ್ಗೆ ಯಾವುದೇ ಖಾತರಿಯಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಆದರೆ ಅಕ್ಬರ್ ವಿರುದ್ಧ ಯಾವುದೇ ಲೀಗಲ್ ಕೇಸ್ ಇಲ್ಲ. ಅವರ ವಿರುದ್ಧ ಆರೋಪಗಳು ಸಚಿವರಾಗುವುದಕ್ಕೂ ಮುಂಚೆ ಬಹು ಹಿಂದೆ ನಡೆದಿರಬಹುದಾದ ಘಟನೆಗಳು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಿರ್ಣಾಯಕ ರಾಜ್ಯ ಚುನಾವಣೆಗಳು ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆಗಳಿಗೆ ಮುಂಚಿತವಾಗಿ ಸಚಿವರನ್ನು ವಜಾ ಮಾಡಿದರೆ ರಾಜಕೀಯ ಬೆಲೆ ತೆರಬೇಕಾಗುತ್ತದೆ ಎಂದು ಕೆಲವು ಮುಖಂಡರು ಎಚ್ಚರಿಸಿದ್ದಾರೆ. ಆದಾಗ್ಯೂ ಕೆಲವು ಕೇಂದ್ರ ಸಚಿವರು ಮಾತ್ರ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಸಂತ್ರಸ್ತೆಯರಿಗೆ ಬೆಂಬಲವಾಗಿ ನಿಂತಿದ್ದಾರೆ.

ಅಕ್ಬರ್ ವಿರುದ್ಧ ಆರೋಪ ನಿಜವಾಗಿದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಥವಾಲೆ ತಿಳಿಸಿದರು.

ಕಾಂಗ್ರೆಸ್, ಸಿಪಿಎಂ, ಮಜ್ಲೀಸ್ ಇ ಮುಸ್ಲಿಮೀನ್ ಮುಂತಾದ ರಾಜಕೀಯ ಪಕ್ಷಗಳು ಅಕ್ಬರ್ ರಾಜೀನಾಮೆಗೆ ಒತ್ತಾಯಿಸಿದವು.
ಪತ್ರಕರ್ತೆ ಪ್ರಿಯಾ ರಮಣಿ ಕಳೆದ ಅ.8ರಂದು ಮಾಡಿದ ಟ್ವೀಟ್‌ನಲ್ಲಿ ಒಂದು ವರ್ಷದ ಹಿಂದೆ ವೋಗ್ ಇಂಡಿಯಾದಲ್ಲಿ ಬರೆದಿದ್ದ ಲೈಂಗಿಕ ಕಿರುಕುಳದ ಭಯಾನಕ ಅನುಭವವು ವಾಸ್ತವವಾಗಿ ಅಕ್ಬರ್ ಅವರಿಗೆ ಸಂಬಂಧಿಸಿದೆ ಎಂದು ತಿಳಿಸುವುದರೊಂದಿಗೆ ಅಕ್ಬರ್ ವಿರುದ್ಧ ಇನ್ನೂ ಅನೇಕ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದವು. 

Recent Comments

Leave Comments

footer
Top