• 18 October 2018 19:13
Jai Kannada
Jai Kannada
Blog single photo
September 29, 2018

ಇಂಡೋನೇಶಿಯಾ ಭೂಕಂಪಕ್ಕೆ 384 ಜನರ ಬಲಿ 

ಪಾಲು: ಪ್ರಬಲ ಭೂಕಂಪದಿಂದ ಅಪ್ಪಳಿಸಿದ ದೈತ್ಯ ಸುನಾಮಿ ಅಲೆಗಳು ಸುಲಾವೇಸಿ ದ್ವೀಪದಲ್ಲಿ ವಿನಾಶವನ್ನು ಉಂಟುಮಾಡಿದ್ದು, ಇದುವರೆಗೆ 384 ಜನರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಈ ಅಧಿಕೃತ ಸಾವಿನ ಸಂಖ್ಯೆಯನ್ನು ಪ್ರಕಟಿಸಿದ್ದು, ಸುನಾಮಿ ಅಪ್ಪಳಿಸಿದ ಪಾಲುವಿನಲ್ಲಿ ಈ ಸಾವುಗಳು ಸಂಭವಿಸಿರುವುದಾಗಿ ತಿಳಿಸಿದೆ.

ಸತ್ತವರ ಸಂಖ್ಯೆ ಇನ್ನೂ ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ. ಸುಮಾರು ಮೂರುವರೆ ಲಕ್ಷ ಜನರ ಆವಾಸಸ್ಥಾನವಾಗಿರುವ ನಗರದಲ್ಲಿ ಭಾಗಶಃ ಮುಚ್ಚಿದ ದೇಹಗಳು ತೀರದ ಬಳಿ ಅನಾಥವಾಗಿ ಬಿದ್ದಿದ್ದವು. ಸುಮಾರು 5 ಅಡಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿದ ಬಳಿಕ ಈ ದೃಶ್ಯಗಳು ಗೋಚರಿಸಿವೆ. ಶುಕ್ರವಾರ ಸಂಜೆ ನಡೆಯಬೇಕಿದ್ದ ಬೀಚ್ ಉತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದ ನೂರಾರು ಜನರ ಸುಳಿವು ಸಿಗದಿರುವ ಬಗ್ಗೆ ಆತಂಕದ ಕಾರ್ಮೋಡ ಕವಿದಿದೆ. ಗಾಯಗೊಂಡವರು ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಮುಗಿಬಿದ್ದಿದ್ದರಿಂದ ತೀವ್ರ ದಟ್ಟಣೆ ಉಂಟಾಗಿದೆ.

ಅನೇಕ ಮಂದಿಯನ್ನು ತೆರೆದ ವಾತಾವರಣದಲ್ಲಿ ಚಿಕಿತ್ಸೆ ನೀಡಲಾಯಿತು.  ಮಣ್ಣಿನಿಂದ ಕೂಡಿದ ಸಣ್ಣ ಮಗುವೊಂದರ ಶವವನ್ನು ಬಂಧುವೊಬ್ಬರು ಒಯ್ಯುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು.

ಕೇಂದ್ರ ಸುಲವೇಸಿಯಲ್ಲಿ ಸಂಜೆ 10 ಕಿಮೀ ಆಳದಲ್ಲಿ ಭೂಕಂಪದ ಅಪ್ಪಳಿಸಿತ್ತು ಎಂದು ಅಮೆರಿಕ ಬೌಗೋಳಿಕ ಸಮೀಕ್ಷೆ ತಿಳಿಸಿದೆ.

Recent Comments

Leave Comments

footer
Top