• 19 March 2019 05:20
Jai Kannada
Jai Kannada
Blog single photo
July 25, 2018

ಲಂಚ ಕೊಟ್ಟವರಿಗೂ ಕಠಿಣ ಶಿಕ್ಷೆ:  ಗ್ರಾಹಕರ ಗತಿಯೇನು? 

ನವದೆಹಲಿ: ಲೋಕಸಭೆಯಲ್ಲಿ ಭ್ರಷ್ಟಾಚಾರ ತಡೆ(ತಿದ್ದುಪಡಿ) ಮಸೂದೆ 2018 ಕ್ಕೆ ಮಂಗಳವಾರ ಅನುಮೋದನೆ ನೀಡಲಾಗಿದೆ. ಸರ್ಕಾರಿ ನೌಕರರು ಮತ್ತು ಅವರಿಗೆ ಲಂಚ ನೀಡಲು ಬಯಸುವ ಸಾರ್ವಜನಿಕರಿಗೆ ಕೂಡ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಲಂಚ ಕೊಟ್ಟವರು ಮತ್ತು ಲಂಚ ತೆಗೆದುಕೊಂಡವರು ತಪ್ಪಿತಸ್ಥರೆಂದು ಸಾಬೀತಾದರೆ ಅವರಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸುವ ಮೂಲಕ ಅನುಚಿತ ಲಾಭ ಗಳಿಸುವ ವ್ಯಾಖ್ಯಾನವನ್ನು ವಿಸ್ತರಿಸಿದೆ.

ಲಂಚ ಕೊಟ್ಟವರು ಮತ್ತು ಲಂಚ ತೆಗೆದುಕೊಂಡವರು ತಪ್ಪಿತಸ್ಥರೆಂದು ಕಂಡುಬಂದರೆ ಅವರಿಗೆ 6 ತಿಂಗಳ ಜೈಲು ಶಿಕ್ಷೆಯಿಂದ 3 ವರ್ಷಗಳವರೆಗೆ ಶಿಕ್ಷೆಯನ್ನು  ವಿಸ್ತರಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳವರೆಗೆ ದಂಡದೊಂದಿಗೆ ವಿಸ್ತರಿಸಬಹುದು. ಪುನರಾವರ್ತಿತ ಅಪರಾಧಿಗಳಿಗೆ ಕನಿಷ್ಠ 5 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದ್ದು, ಇದನ್ನು ದಂಡದೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ. ರಾಜ್ಯಸಭೆಯಲ್ಲಿ ಈಗಾಗಲೇ ಮಸೂದೆ ಅನುಮೋದನೆಯಾಗಿದ್ದು, ರಾಷ್ಟ್ರಪತಿ ಅನುಮತಿ ನೀಡಿದ ಕೂಡಲೇ ಕಾಯಿದೆಯಾಗುತ್ತದೆ. ಉಡುಗೊರೆಗಳನ್ನು ಸರ್ಕಾರಿ ಅಧಿಕಾರಿಗಳಿಗೆ ನೀಡುವುದನ್ನು ಕೂಡ ಅಪರಾಧವೆಂದು ಪರಿಗಣಿಸಲು ಮಸೂದೆಯಲ್ಲಿ ಕೋರಲಾಗಿದೆ.

ಅನುಚಿತ ಲಾಭಕ್ಕಾಗಿ/ ದುರುದ್ದೇಶದ ಉದ್ದೇಶಕ್ಕೆ  ನೀಡುವ ಉಡುಗೊರೆ ಕೂಡ ಭ್ರಷ್ಟಾಚಾರದ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಜೈಲು ವಾಸದ ಅವಧಿ ಹೆಚ್ಚಿಸಿರುವ ಜತೆಗೆ ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಸರ್ಕಾರಿ ನೌಕರನ ಅಕ್ರಮ ಆಸ್ತಿಯನ್ನು ತಕ್ಷಣವೇ ಜಫ್ತಿ ಮಾಡಲು ಕಾಯಿದೆಯಲ್ಲಿ ಅವಕಾಶವಿದೆ. ಇವೆಲ್ಲಾ ಕಾನೂನುಗಳು ಬೆಂಗಳೂರಿನ ಬಿಬಿಎಂಪಿ, ಬೆಸ್ಕಾಂಗಳಿಗೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಈಗ ಮೂಡಿದೆ. ಇದಲ್ಲದೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಗ್ರಾಹಕರು ಲಂಚ ಕೊಡಲೇಬೇಕಾದ ಅನಿವಾರ್ಯ ಸ್ಥಿತಿಯಿದೆ. 

ಬಿಬಿಎಂಪಿ ಕಚೇರಿಗಳಲ್ಲಿ ನಕ್ಷೆ ಮಂಜೂರಾತಿಗೆ ಸಾವಿರಾರು ರೂ. ಲಂಚ ಪಡೆಯುವ ಪರಿಪಾಠ ಅವ್ಯಾಹತವಾಗಿ ಈಗಲೂ ನಡೆದಿದೆ. ಇನ್ನು ಬೆಸ್ಕಾಂ ಕಚೇರಿಗಳಲ್ಲಿ ಕೂಡ ವಿದ್ಯುತ್ ಸಂಪರ್ಕ ಪಡೆಯಲು ಪರೋಕ್ಷವಾಗಿ ಲಂಚ ನೀಡುವ ಪದ್ಧತಿ ಚಾಲ್ತಿಯಲ್ಲಿದೆ. ಈಗ ಲಂಚ ನೀಡದಿದ್ದರೆ ಗ್ರಾಹಕರು ತೊಂದರೆ ಅನುಭವಿಸಬೇಕಾದ ಸ್ಥಿತಿಯಿದೆ.ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಲಂಚ ಕೊಟ್ಟವರನ್ನೂ ಶಿಕ್ಷಿಸಿದರೆ, ಗ್ರಾಹಕರ ಗತಿ ಏನಾಗುತ್ತದೆ ಎಂದು ಚಿಂತಿಸಬೇಕಾಗಿದೆ.

Recent Comments

Leave Comments

footer
Top