• 19 August 2018 23:09
Jai Kannada
Jai Kannada
Blog single photo
May 25, 2018

 ಕಾಂಗ್ರೆಸ್ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದರ ಗುಟ್ಟೇನು?

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಗೆದ್ದರು. ಈ ಅಪವಿತ್ರ ಮೈತ್ರಿಯ ಸರ್ಕಾರಕ್ಕೆ ನಿದ್ರೆ ಮಾಡಲು ಬಿಡೋಲ್ಲ ಎಂದು ಬಿಜೆಪಿ ಎಚ್ಚರಿಕೆ,  ಸಾಲ ಮನ್ನಾಗೆ ಒತ್ತಾಯಿಸಿ ಸೋಮವಾರವೇ ಕರ್ನಾಟಕ ಬಂದ್‌ಗೆ ಯಡಿಯೂರಪ್ಪ ಕರೆ ಎಲ್ಲವೂ ಮೈತ್ರಿ ಸರ್ಕಾರವನ್ನು ಧೃತಿಗೆಡಿಸುವ ಪ್ರಕ್ರಿಯೆಗಳೇ. ಈ ಬಂದ್‌ಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇದೆಕ್ಕೆಲ್ಲಾ ಹೆದರೋಲ್ಲ ಎಂದು ಕುಮಾರಸ್ವಾಮಿ ಖಡಕ್ಕಾಗಿ ಉತ್ತರಿಸಿದ್ದೂ ಆಯಿತು.

ಯಡಿಯೂರಪ್ಪ ಗರಂ ಆಗಿರುವುದೇಕೆ  ಕೇವಲ 37 ಸ್ಥಾನ ಗಳಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ಯಡಿಯೂರಪ್ಪಗೆ ನುಂಗಲಾಗದ ಬಿಸಿ ತುಪ್ಪವಾಗಿತ್ತು. 104 ಸ್ಥಾನ ಬಿಜೆಪಿ ಗಳಿಸಿದರೂ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂಬ ಹತಾಶೆ, ನೋವು, ನಿರಾಶೆ ಅವರ ಧ್ವನಿಯಲ್ಲಿ ಅಡಗಿತ್ತು. ಈ ನೋವು, ನಿರಾಶೆಗಳನ್ನು ಸದನದಲ್ಲಿ ಸಹಜವಾಗಿ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಸಭಾತ್ಯಾಗಕ್ಕೆ ಮುಂಚೆ ಕಾಂಗ್ರೆಸ್ ಪಕ್ಷಕ್ಕೆ ಬಿಸಿ ಮುಟ್ಟಿಸದೇ ಬಿಡಲಿಲ್ಲ. ಮುಳುಗುವ ಹಡಗಿನಲ್ಲಿ ನೀವೂ ಮುಳುಗಿಹೋಗುತ್ತೀರಿ ಎಂಬ ಎಚ್ಚರಿಕೆಯನ್ನೂ ಶಿವಕುಮಾರ್‌ಗೆ ನೀಡಿದರು. ಅವರನ್ನು ಖಳನಾಯಕರಂತೆ ಬಿಂಬಿಸಿದರು. ಸಿದ್ದರಾಮಯ್ಯನ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದರು.    ಹಿಂದೆ ಜೆಡಿಎಸ್-ಬಿಜೆಪಿ 20-20 ಸರ್ಕಾರದಲ್ಲಿ ಯಡಿಯೂರಪ್ಪ ಅನುಭವಿಸಿದ ನೋವು, ಸಂಕಟ ಎಲ್ಲವೂ ಬುಟ್ಟಿಯಿಂದ ಹೊರತೆಗೆದ ಹಾವಿನಂತೆ ಬುಸುಗುಟ್ಟುತ್ತಾ ಹೊರಬಂದವು. 

ದ.ಕ.ದಲ್ಲಿ ಜೆಡಿಎಸ್ ಸಾಧನೆ ಶೂನ್ಯ 
  ಜೆಡಿಎಸ್ ಬೀದರ್, ರಾಯಚೂರಿನ ನಾಲ್ಕೈದು ಕ್ಷೇತ್ರಗಳು, ಹಾಸನ  ಮಂಡ್ಯ, ಮೈಸೂರು ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಕರ್ನಾಟಕದ ಉಳಿದ ಭಾಗಗಳಲ್ಲಿ ಜೆಡಿಎಸ್ ಪ್ರಾತಿನಿಧ್ಯ ಶೂನ್ಯ. ಕೇವಲ 37 ಕ್ಷೇತ್ರಗಳಲ್ಲಿ ಗೆದ್ದ ಜೆಡಿಎಸ್‌ಗೆ ಕಾಂಗ್ರೆಸ್ ಮುಖ್ಯಮಂತ್ರಿಯಾಗುವ ಅವಕಾಶ ಕೊಟ್ಟಿದ್ದು ಆಶ್ಚರ್ಯ ಮೂಡಿಸಬಹುದು. ಕಾಂಗ್ರೆಸ್ 78 ಸೀಟು ಗೆದ್ದಿರುವಾಗ  ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರಮೇಶ್ವರ್ ಅಥವಾ ಬೇರೆ ಯಾರಾದರೂ ಹೆಸರನ್ನು ಸೂಚಿಸಬಹುದಿತ್ತು. ನಂತರ ಜೆಡಿಎಸ್‌ ಜತೆ ಮೈತ್ರಿ ಮಾತುಕತೆ ನಡೆಸಿದ್ದರೆ ಜೆಡಿಎಸ್ ಮೈತ್ರಿಗೆ ಒಪ್ಪುತ್ತಿರಲಿಲ್ಲವೇ ಎನ್ನುವುದು ಯಕ್ಷಪ್ರಶ್ನೆ. ಕಾಂಗ್ರೆಸ್ ಏಕೆ ಆಡಳಿತದ ಚುಕ್ಕಾಣಿ ಕೈಗೆತ್ತಿಕೊಳ್ಳಲಿಲ್ಲ ಎನ್ನುವುದರ ಹಿಂದೆ ಬಲವಾದ ರಾಜಕೀಯ ಲೆಕ್ಕಾಚಾರವಿದೆ. ಅದು ರಾಜಕೀಯ ಶಕ್ತಿ ಕೇಂದ್ರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ದೂರದೃಷ್ಟಿಯ ಫಲವಾಗಿಯೇ ಇಂದು ಜೆಡಿಎಸ್ ನೊಗ ಹೊರುವ ಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ.

 ಲೋಕಸಭೆ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು

2019 ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ಗೆ ಮೋದಿ ಸಾರಥ್ಯದ ಬಲಿಷ್ಠ ಬಿಜೆಪಿಯನ್ನು ಬಗ್ಗುಬಡಿಯಲು ಏಕಾಂಗಿ ಹೋರಾಟ ಅಸಾಧ್ಯ. ಅದಕ್ಕಾಗಿ ಕಾಂಗ್ರೆಸ್‌ಗೆ ಪ್ರಾದೇಶಿಕ ಪಕ್ಷಗಳ ಮೈತ್ರಿ ಬೇಕಿತ್ತು. ಉತ್ತರಪ್ರದೇಶದಲ್ಲಿ ಬಿಎಸ್‌ಪಿ, ಎಸ್‌ಪಿ, ಆಂಧ್ರದಲ್ಲಿ ತೆಲುಗುದೇಶಂ, ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮುಂತಾದ ಪ್ರಾದೇಶಿಕ ಪಕ್ಷಗಳ ಮಹಾಮೈತ್ರಿಯಿಂದ ಬಿಜೆಪಿಯನ್ನು ಬಗ್ಗುಬಡಿಯಲು ಕಾಂಗ್ರೆಸ್ ನಿರ್ಧರಿಸಿದೆ. ಅದಕ್ಕಾಗಿಯೇ ಕರ್ನಾಟಕ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಅಧಿಕಾರ ಹಸ್ತಾಂತರದ ಮೂಲಕ ಅವುಗಳ ಒಲವನ್ನು ಕಾಂಗ್ರೆಸ್ ಗಳಿಸಿದೆ.   ಪಶ್ಚಿಮಬಂಗಾಳ, ಉತ್ತರಪ್ರದೇಶ, ಆಂಧ್ರದ ನಾಯಕರ ದಂಡೇ ಕುಮಾರಸ್ವಾಮಿ ಪ್ರತಿಜ್ಞಾವಿಧಿ ಸಮಾರಂಭಕ್ಕೆ ಹರಿದುಬಂದಿದ್ದು ಇದಕ್ಕೆ ಸಾಕ್ಷಿಯಾಗಿದೆ.   ಇದು ಲೋಕಸಭೆಯ ಚುನಾವಣೆ ಗೆಲುವಿನ ದಿಕ್ಸೂಚಿ ಎಂದು ಕಾಂಗ್ರೆಸ್ ಭಾವಿಸಿದೆ. ಆದರೆ ಎಲ್ಲವೂ ಅದು ಎಣಿಸಿದಂತೆ ನಡೆಯುತ್ತದೆಂದು ಹೇಳಲು ಹೇಗೆ ಸಾಧ್ಯ. 

Recent Comments

Leave Comments

footer
Top