ಕೃಷಿ ಕಡೆಗಣಿಸಿದ ಸರ್ಕಾರಗಳು: ನೇಣಿಗೆ ಕೊರಳೊಡ್ಡುವ ರೈತ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ 25 ರೈತರು ಕಳೆದ ತಿಂಗಳಿನಿಂದೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದರು. 8 ಕಬ್ಬು ಬೆಳೆಗಾರರು ಸಾಲದ ಭಾದೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಳಿದವರು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 
 
ರಾಜ್ಯ ಕೃಷಿ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ 2009-10ರಲ್ಲಿ 145 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 50. ಆದರೆ 2015ರಲ್ಲಿ ಕೇವಲ ಒಂದೇ ತಿಂಗಳಲ್ಲಿ 25 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾದರೆ ರೈತರ ಆತ್ಮಹತ್ಯೆ ಪ್ರಕರಣಗಳು 2015ರಲ್ಲಿ ಇನ್ನಷ್ಟು ಕುಸಿಯಬೇಕಾಗಿತ್ತು. ಆದರೆ ಒಮ್ಮಿಂದೊಮ್ಮೆಲೆ ಆಕಾಶಕ್ಕೆ ಜಿಗಿದಿದ್ದು ಹೇಗೆ? ನಾನಾ ಕಾರಣಗಳಿಗಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಿದ್ದರಾಮಯ್ಯ ಹೇಳುತ್ತಾರೆ.
 
ಆದರೆ ಸಾಲಭಾದೆಯಿಲ್ಲದೇ ಕೌಟುಂಬಿಕ ಕಾರಣಗಳಿಗಾಗಿ ಅಷ್ಟೊಂದು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿದೆಯೇ? ಹೆಚ್ಚಿನ ಬಡ್ಡಿ ವಿಧಿಸುವ ಲೇವಾದೇವಿಗಾರರ ಮೇಲೆ ಕ್ರಮ ಕೈಗೊಳ್ಳುವುದಾಗಿಯೂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಆದರೆ ಹೆಚ್ಚಿನ ಬಡ್ಡಿವಿಧಿಸಿದರೂ ಲೇವಾದೇವಿಗಾರರ ಬಳಿ ರೈತರು ಯಾಕೆ ಹೋಗುತ್ತಾರೆ? ರೈತರಿಗೆ ಸಾಲ ತೆಗೆದುಕೊಳ್ಳಲು ಬೇರಾವುದೇ ಮಾರ್ಗೋಪಾಯ ಸಿಗದೇ ಅವರ ಬಳಿ ಹೋಗುತ್ತಾರೆನ್ನುವುದು ಸರ್ವವಿಧಿತ.
 
ಬ್ಯಾಂಕ್‌ಗಳಲ್ಲಿ ಅಷ್ಟು ಸುಲಭವಾಗಿ ರೈತರಿಗೆ ಸಾಲ ಸಿಗುವಂತಿದ್ದರೆ ರೈತರು ಹೆಚ್ಚಿನ ಬಡ್ಡಿಗೆ ಸಾಲತೆಗೆದುಕೊಳ್ಳುವ ಪ್ರಮೇಯ ಬರುತ್ತದೆಯೇ? ಇದಲ್ಲದೇ ರೈತರು ಬೆಳೆದ ಕಬ್ಬನ್ನು ಖರೀದಿಸಿದ ಗಳಿಗೆಯಲ್ಲೇ ಕಾರ್ಖಾನೆ  ಮಾಲೀಕರಿಂದ ಹಣ ಸಿಕ್ಕಿದ್ದರೆ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಾರಾ? ಇವೆಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಬೇಕಾಗಿದೆ.  ರೈತರ ಆತ್ಮಹತ್ಯೆ ಪ್ರಕರಣಗಳು ಕರ್ನಾಟಕದಲ್ಲಿ ಮಾತ್ರ ಸಂಭವಿಸುತ್ತಿಲ್ಲ ಎನ್ನುವ ವಿಷಯದಲ್ಲಿ ನಾವು ಸಮಾಧಾನಪಟ್ಟು ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಕೂಡ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರದ ವಿದರ್ಭದಲ್ಲಿ 12 ರೈತರು 72 ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿದರ್ಭದಲ್ಲಿ ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಈ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. 
 
ಭಾರತದಲ್ಲಿ 60% ಜನರು  ಕೃಷಿ ಮೇಲೆ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ  ಅವಲಂಬಿತರಾಗಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಭಾರತದ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ 11.2%ರಷ್ಟಾಗಿದೆ. ಕೃಷಿತಜ್ಞರು ಮತ್ತು ಕಾರ್ಯಕರ್ತರು ರೈತರ ಆತ್ಮಹತ್ಯೆಗೆ ನಾನಾ ಕಾರಣಗಳನ್ನು ನೀಡುತ್ತಾರೆ. ಮುಂಗಾರು ಮಳೆಯ ವಿಫಲತೆ, ಅಧಿಕ ಸಾಲದ ಹೊರೆ, ಕುಲಾಂತರಿ ತಳಿಯ ಬೆಳೆಗಳು, ಸರ್ಕಾರದ ನೀತಿಗಳು, ವೈಯಕ್ತಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆಗಳು ಹೀಗೆ ನಾನಾ ಕಾರಣಗಳನ್ನು ನೀಡುತ್ತಾರೆ. ಬಂಗಾಳದ ಮುಂಚಿನ ಎಡರಂಗ ಸರ್ಕಾರದ ಹಣಕಾಸು ಸಚಿವ ಅಸೀಮ್ ದಾಸ್ ಗುಪ್ತಾ ಭಾರತದ ಕಳಪೆ ಅರ್ಥವ್ಯವಸ್ಥೆಗೆ ಮೂಲಭೂತ ಕಾರಣ ಕೃಷಿಗೆ ಸರ್ಕಾರ ತೋರುತ್ತಿರುವ ಉದಾಸೀನ ಮನೋಭಾವ ಎಂದು ಹೇಳಿದ್ದಾರೆ. 
ಭಾರತ ಎರಡನೇ ಅತೀ ಹೆಚ್ಚು ಜನಸಂಖ್ಯಾಭರಿತ ರಾಷ್ಟ್ರ, ನಾಲ್ಕನೇ ಅತೀ ದೊಡ್ಡ ಕೃಷಿ ಕ್ಷೇತ್ರ. ಭಾರತಕ್ಕೆ ಸಂಬಂಧಿಸಿದಂತೆ ಪುಖಾನುಪುಂಖವಾಗಿ ನುಡಿಮುತ್ತುಗಳು ಉದುರುತ್ತವೆ. ಆದರೂ 40 ಕೋಟಿ ಜನರು ದಿನಕ್ಕೆ ಒಂದು ಡಾಲರ್‌ಗೆ ಕಡಿಮೆ ಹಣದಲ್ಲಿ ಬದುಕು ಸಾಗಿಸುತ್ತಾರೆ. 21 .1 ಕೋಟಿ ಜನರು ಅಪೌಷ್ಠಿಕತೆಯ ಗೂಡಾಗಿದ್ದಾರೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 177 ರಾಷ್ಟ್ರಗಳ ಪೈಕಿ ಭಾರತಕ್ಕೆ 127ನೇ ಸ್ಥಾನ. ಕೃಷಿ ದೈತ್ಯ ಮತ್ತು ವಿಶ್ವವ್ಯಾಪಿ ಬೆಳವಣಿಗೆಯ ಚಾಲಕಶಕ್ತಿ ಎಂದು ಹೆಸರಾದ ಭಾರತಕ್ಕೆ ತನ್ನ ಮನೆಯಂಗಳದಲ್ಲಿ ಆಹಾರ ಭದ್ರತೆ ಖಾತರಿ ಯಾಕೆ ಸಾಧ್ಯವಾಗಿಲ್ಲ.
 
ಕೃಷಿ ದೈತ್ಯನು ತನ್ನ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಅಸಮರ್ಥನಾಗಿದ್ದಾನೆ. ಇದಕ್ಕೆ ನಾನಾ ಕಾರಣಗಳನ್ನು ಕೃಷಿತಜ್ಞರು ಉಲ್ಲೇಖಿಸಿದ್ದಾರೆ. 
 
1. ಭಾರತದ ಕೃಷಿ ಉತ್ಪಾದನೆ ಹೆಚ್ಚಾಗಿ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ. ಕೆಟ್ಟ ಮುಂಗಾರು ಅಂದರೆ ವಿಪರೀತ ಪ್ರಮಾಣದ ಮಳೆ ಅಥವಾ ಕಡಿಮೆ ಮಳೆಯಿಂದ ಇಳುವರಿಯಲ್ಲಿ ಏರುಪೇರಾಗುತ್ತದೆ. 
2. ಸಾಕಷ್ಟು ಉತ್ಪಾದನೆ ಕೊರತೆಯಿಂದ ಭಾರತದ ಕೃಷಿ ಕ್ಷೇತ್ರ ಬಡವಾಗಿದೆ. ತುಂಡು  ಕೃಷಿ ಭೂಮಿ,  ಕೃಷಿ ಯಂತ್ರಗಳ ಸೀಮಿತ ಬಳಕೆ, ಸೂಕ್ತ ಉಪಕರಣ ಮತ್ತು ಮೂಲಸೌಲಭ್ಯಗಳ ಕೊರತೆ ಮತ್ತು 1970ರ ದಶಕದ ಹಸಿರು ಕ್ರಾಂತಿಯ ಹಾನಿಕರ ಪರಿಣಾಮಗಳು.
ಸಣ್ಣ ಗಾತ್ರದ  ಕೃಷಿ ಭೂಮಿಯು ಯಾಂತ್ರಿಕ  ಕೃಷಿ ಯಂತ್ರಗಳ ಸೀಮಿತ ಬಳಕೆಗೆ ಹಿಂದಿರುವ ಕಾರಣ. ಇದರಿಂದ ಹೆಚ್ಚು ಸಂಘಟಿತ ಮತ್ತು ಉತ್ಪಾದಕ  ಕೃಷಿ ಕ್ಷೇತ್ರದ ಅಭಿವ್ರದ್ಧಿಗೆ ತೊಡಕಾಗಿದೆ.
 
3. ಮೂಲಸೌಲಭ್ಯದಲ್ಲಿ ಕಡಿಮೆ ಹೂಡಿಕೆ ಎದ್ದುಕಾಣುತ್ತದೆ. ಇದು ಭಾರತದ  ಕೃಷಿ  ಉತ್ಪಾದನೆಗೆ ನೇರ ಪರಿಣಾಮ ಬೀರುತ್ತದೆ. ಕೃಷಿ ಇಳುವರಿಗಳ ದಾಸ್ತಾನು ಸೌಲಭ್ಯಗಳ ಕೊರತೆಯಿಂದ ವಿಪರೀತ ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತದೆ. ಇದಲ್ಲದೇ ಶೇ. 30ರಷ್ಟು  ಕೃಷಿಭೂಮಿಯಲ್ಲಿ ಮಾತ್ರ ನೀರಾವರಿ ಪದ್ಧತಿ ಅಳವಡಿಕೆಯಾಗಿದೆ. ಒಟ್ಟಿನಲ್ಲಿ  ಕೃಷಿಯಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷವೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವೆಂದರೆ ತಪ್ಪಾಗಲಾರದು. Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery