ತಮಿಳುನಾಡು ರಾಜಕೀಯ ಹಗ್ಗ ಜಗ್ಗಾಟದಲ್ಲಿ ಗೆದ್ದವರು ಸೋತರು, ಸೋತವರು ಮಣ್ಣುಮುಕ್ಕಿದರು

ತಮಿಳುನಾಡು ರಾಜಕೀಯ ಹಗ್ಗ-ಜಗ್ಗಾಟದಲ್ಲಿ ಸೋತವರು ಮಣ್ಣುಮುಕ್ಕಿದರು. ಗೆದ್ದವರು  ಸೋತರು. ಚಿನ್ನಮ್ಮ ಅರ್ಥಾತ್ ಶಶಿಕಲಾ ಜಯಲಲಿತಾ ಮಣ್ಣುಪಾಲಾದ ಮರುಗಳಿಗೆಯೇ ಮುಖ್ಯಮಂತ್ರಿ ಪಟ್ಟಕ್ಕೇರುವ ಕನಸು ಹೊತ್ತಿದ್ದರು. ಆದರೆ ಪನ್ನೀರ್ ಸೆಲ್ವಂ ಶಶಿಕಲಾಗೆ ಸೆಡ್ಡು ಹೊಡೆದು ಅಡ್ಡಗಾಲು ಹಾಕಿದರು. ನಂತರದ ಬೆಳವಣಿಗೆಗಳು ಶಶಿಕಲಾಕರನ್ನು ಪರಪ್ಪನ ಅಗ್ರಹಾರಕ್ಕೆ ದೂಡಿತು.

ಪರಪ್ಪನ ಅಗ್ರಹಾರ  ಸೇರುವುದಕ್ಕೆ ಮುಂಚೆ ಶಶಿಕಲಾ ಜಯಾ ಸಮಾಧಿಯಲ್ಲಿ ಶಪಥ ಮಾಡುವ ಮೂಲಕ ರಾಜಕೀಯ ಸೇಡಿಗೆ ಮುನ್ನುಡಿ ಬರೆದರು. ಹೀಗಾಗಿ ಬಂಡಾಯವೆದ್ದ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗುವ ಕನಸಿಗೆ ತಣ್ಣೀರ್ ಬಿತ್ತು. ಪನ್ನೀರ್ ಬಣದ ಸದಸ್ಯರು ಕೂಡ ಯಾವುದೇ ಪದವಿಯಿಲ್ಲದೇ ವಿಧಾನಸಭೆಯ ಸದಸ್ಯತ್ವವನ್ನು ಮಾತ್ರ ಉಳಿಸಿಕೊಂಡು ದಿಕ್ಕಿಲ್ಲದ ಪರದೇಸಿಗಳಂತಾಗಿದ್ದಾರೆ.  ಕಳೆದುಹೋದ ಸ್ಥಾನಮಾನ ಮತ್ತೆ ಸಂಪಾದಿಸುವುದು ಹೇಗೆಂಬುದೇ ಸೆಲ್ವಂ ಬಣದ ಯೋಚನೆಯಾಗಿದೆ.

 ಬೂದಿಮುಚ್ಚಿದ ಕೆಂಡದಂತೆ ಅವರ ಮನಸ್ಸಿನಲ್ಲಿ ಶಶಿಕಲಾ ವಿರುದ್ಧ ಸೇಡಿನ ಜ್ವಾಲೆ ಧಗಧಗಿಸುತ್ತಿದೆ.  ಶಶಿಕಾಲ ಕೂಡ ಅವರೆಲ್ಲರನ್ನೂ ರಾಜಕೀಯವಾಗಿ ಮುಗಿಸುವುದು ಹೇಗೆಂದು ಯೋಜನೆ ರೂಪಿಸುತ್ತಿದ್ದಾರೆ. ಸಮಾಧಿಯಲ್ಲಿ ಮಾಡಿದ ಶಪಥ ಈಡೇರಿಸುವುದು ಅವರ ಗುರಿಯಾಗಿದೆ.. ಹೀಗಾಗಿ ತಮಿಳುನಾಡು ಎಐಎಡಿಎಂಕೆಯ ಇಬ್ಬಣಗಳ ನಡುವೆ ಒಂದು ರೀತಿಯಲ್ಲಿ ಸೇಡಿನ ರಾಜಕಾರಣ ಹಾಗೇ ಮುಂದುವರಿದಿದೆ. ಈ ಸೇಡಿನ ರಾಜಕಾರಣಕ್ಕೆ ವಿಧಾನಸಭೆಯಲ್ಲಿ  ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ನಡೆದ ಗದ್ದಲ, ಗೌಜು, ಹೊಯ್ ಕೈಗೆ ಸಾಕ್ಷಿಯಾಗಿದೆ.

 ಎಐಎಡಿಎಂಕೆ ಒಡೆದ ಮನೆ

ಈಗ ಎಐಎಡಿಎಂಕೆ ಜಯಾ ನಿಧನದ ಬಳಿಕ ಒಡೆದ ಮನೆಯಾಗಿದ್ದು, ಈ ಒಡೆದ ಮನೆಯಲ್ಲಿ ಸದ್ಯಕ್ಕೆ ಶಶಿಕಲಾ ಬಣದ ಸದಸ್ಯರ ಕೈಮೇಲಾಗಿದೆ. ಆದರೆ ಪನ್ನೀರ್ ಬಣವೂ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ರಾಜಕೀಯ ಸ್ಥಾನಮಾನಗಳಿಗಾಗಿ ಕಾಯುತ್ತಾ ತುದಿಗಾಲಲ್ಲಿ ನಿಂತಿರುತ್ತಾರೆ.  ಎಐಎಡಿಎಂಕೆಯಲ್ಲಿ ಬಂಡಾಯದಿಂದ ಡಿಎಂಕೆಗೆ ಲಾಭವಾಗುವ ನಿರೀಕ್ಷೆ ಹೊಂದಿದ್ದ ಸ್ಟಾಲಿನ್‌ಗೆ ಕೂಡ ಪಳನಿಸ್ವಾಮಿ ಮತವಿಭಜನೆಯಲ್ಲಿ ಗೆದ್ದ ಕೂಡಲೇ ನಿರಾಶೆಯಾಯಿತು. ಆ ನಿರಾಶೆಯನ್ನು ವಿಶ್ವಾಸ ಮತಯಾಚನೆಯಲ್ಲಿ ಗದ್ದಲ, ಗೌಜಿನ ಮೂಲಕ ವ್ಯಕ್ತಪಡಿಸಿದರು.

 ಪಳನಿಸ್ವಾಮಿ ಮುಖ್ಯಮಂತ್ರಿ ಸ್ಥಾನ ಇನ್ನೆಷ್ಟು ದಿವಸ

 

ಶಶಿಕಲಾ ಬಣದ ಪಳನಿಸ್ವಾಮಿ ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದ್ದರೂ ಕೂಡ ಶಶಿಕಲಾ ಅಷ್ಟರಲ್ಲೇ  ಜೈಲು ಸೇರಿದ್ದರು. ಮುಖ್ಯಮಂತ್ರಿ ಆಸೆಗೆ ಪನ್ನೀರ್ ತಣ್ಣೀರ್ ಎರಚಿದ್ದರಿಂದ ಅವರ ಬಣ ಗೆದ್ದರೂ ಶಶಿಕಲಾ ಸೋತ ಹಾಗೆ.

  ಶಶಿಕಲಾ ರಾಜಕೀಯ ಜೀವನಕ್ಕೆ ಬ್ರೇಕ್ 

ತಮಿಳುನಾಡಿನಲ್ಲಿ ಅವರ ಅಲ್ಪಕಾಲೀನ ರಾಜಕೀಯ ಜೀವನಕ್ಕೆ ಬ್ರೇಕ್ ಸದ್ಯಕ್ಕಂತೂ ಬಿದ್ದಿದೆ. ಆದರೆ ಹಿಂಬಾಗಿಲ ರಾಜಕೀಯದ ಮೂಲಕ ಪನ್ನೀರ್ ಬಣಕ್ಕೆ ಮಣ್ಣುಮುಕ್ಕಿಸುವ ಶಪಥ ಕೈಗೊಂಡಿದ್ದಾರೆ. ಹೀಗಾಗಿ ಎಐಎಡಿಎಂಕೆಯ ಎರಡು ಬಣಗಳ ಕಚ್ಚಾಟದಿಂದ ತಮಿಳುನಾಡಿನ ಜನತೆ ನಿರಾಶರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಐಎಡಿಎಂಕೆ ಜಯಗಳಿಸುವುದು ಕಬ್ಬಿಣದ ಕಡಲೆಯಾಗಿ ಪರಿಣಮಿಸಬಹುದು.  ಇನ್ನು ತಮಿಳುನಾಡು ವಿಧಾನಸಭೆಯ ವಿಶ್ವಾಸಮತ ಯಾಚನೆಯಲ್ಲಿ ಗೆದ್ದವರು ಒಂದು ರೀತಿಯಲ್ಲಿ ಸೋತಹಾಗೆ. ಮುಖ್ಯಮಂತ್ರಿ ಚಿನ್ನಮ್ಮನ ಕೈಗೊಂಬೆಯಂತೆ ಇರಬೇಕಾಗುತ್ತದೆ. ಚಿನ್ನಮ್ಮ ಹೇಳಿದ್ದೇ ವೇದವಾಕ್ಯವಾಗುತ್ತದೆ. ಹೀಗಾಗಿ ನಾಮಕಾವಾಸ್ಥೆ ಮುಖ್ಯಮಂತ್ರಿಯಾಗಿ ಗದ್ದುಗೆಯಲ್ಲಿ ಕುಳಿತಿರಬೇಕಾಗುತ್ತದೆ. ಚಿನ್ನಮ್ಮ ಜೈಲು ಸೇರುವುದಕ್ಕೆ ಮುಂಚೆ ಪಳನಿಸ್ವಾಮಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆಂದು ಹೇಳಲಾಗುತ್ತಿದೆ. ಈ ಶರತ್ತುಗಳೆಂಬ ದಿವ್ಯಾಸ್ತ್ರ ಪ್ರಯೋಗದಿಂದ ಪಳನಿಸ್ವಾಮಿ ಸ್ಲಲ್ಪ ಸಮಯದ ಬಳಿಕ ಅಧಿಕಾರ ತ್ಯಜಿಸಬಹುದು.

 ಶಶಿಕಲಾ ಅಲ್ಪಕಾಲೀನ ರಾಜಕೀಯಕ್ಕೆ ಬ್ರೇಕ್

ಹಾಗಾದರೆ ಪಳನಿಸ್ವಾಮಿ ನಂತರ ಮುಂದಿನ ಮುಖ್ಯಮಂತ್ರಿ ಯಾರಾಗಿರಬಹುದು ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಶಶಿಕಲಾ ತನ್ನ ಬಂಧುಗಳಲ್ಲಿ ಒಬ್ಬರಾದ, ಮನ್ನಾರ್ ಗುಡಿಯ ದಿನಕರನ್ ಅವರನ್ನು ಉಪ ಪ್ರದಾನಕಾರ್ಯದರ್ಶಿಯಾಗಿ ನೇಮಿಸುವ ಮೂಲಕ ತಮಿಳುನಾಡಿನ ರಾಜಕೀಯದಲ್ಲಿ ತಮ್ಮ  ಹಿಡಿತವನ್ನು ಬಿಗಿಗೊಳಿಸಿದ್ದಾರೆ. ಇನ್ನು ಪನ್ನೀರ್ ಸೆಲ್ವಂ ಬಣ ತಮಿಳುನಾಡಿನ ರಾಜಕೀಯದಿಂದಲೇ ಮರೆಯಾಗುವ ಲಕ್ಷಣಗಳು ಗೋಚರಿಸಿವೆ. ಆದರೆ ಮುಳುಗುತ್ತಿರುವವರಿಗೆ ಒಂದು ಸಣ್ಣ ಕಡ್ಡಿಯ ಆಸರೆ ತುಂಡು ಸಿಕ್ಕರೆ ಜೀವವುಳಿಸಿಕೊಳ್ಳಲು ನೋಡುತ್ತಾರೆಂಬ ಮಾತಿದೆ. ಇನ್ನು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಧುಮುಕುತ್ತಾರೆಂಬ ವದಂತಿಗೆ ರೆಕ್ಕೆ, ಪುಕ್ಕ ಸಿಕ್ಕಿದೆ. ರಜನಿಕಾಂತ್  ರಾಜಕೀಯ ಪ್ರವೇಶಿಸಿದರೆ ತಮಿಳುನಾಡಿನ ರಾಜಕೀಯದಲ್ಲಿ ಅಲ್ಲೋಕಕಲ್ಲೋಲ ಉಂಟು ಮಾಡುವುದಂತೂ ಸತ್ಯ, ರಜನಿಕಾಂತ್ ತಮ್ಮದೇ ಪಕ್ಷವನ್ನು ಸ್ಥಾಪಿಸಿ ಆ ಪಕ್ಷಕ್ಕೆ ತಮಿಳುನಾಡಿನ ರಾಜಕೀಯದಲ್ಲಿ ನೆಲೆ ಕಲ್ಪಿಸಿದರೆ ತಮಿಳುನಾಡಿನಲ್ಲಿ ಮೂರು ಪ್ರಾದೇಶಿಕ ಪಕ್ಷಗಳು ಜನ್ಮತಾಳಿದ ಹಾಗಾಗುತ್ತದೆ. ಈ ಮೂರು ಪ್ರಾದೇಶಿಕ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿ ಹೋರಾಟ ನಡೆದಾಗ ರಜನಿಕಾಂತ್  ಪಕ್ಷವು ಗೆಲ್ಲುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಜನಿಕಾಂತ್ ಒಂದು ವೇಳೆ ಬಹುಮತ ಸಾಧಿಸಲು ವಿಫಲರಾದರೆ ಬಿಜೆಪಿ ಅವರಿಗೆ ಆಸರೆಯಾಗಿ ನಿಲ್ಲಬಹುದು. ಆಗ ಒಡೆದ ಮನೆಯಾಗಿದ್ದ ಎಐಎಡಿಎಂಕೆ ಪಾಳು ಬಿದ್ದ ಮನೆಯಾಗುವುದರಲ್ಲಿ ಎರಡು ಮಾತಿಲ್ಲ.  ಈ ಬೆಳವಣಿಗೆಯಿಂದ  ಎಐಎಡಿಎಂಕೆಯನ್ನು ಒಂದು ಮನೆಯಾಗಿ ತೆಗೆದುಕೊಂಡು ಹೋಗಿದ್ದ ಜಯಲಿಲತಾ ಅವರ ಆತ್ಮ ಪರಿತಪಿಸಬಹುದು.

 

ಜಯಾ ಆತ್ಮ ಪರಿತಪಿಸುತ್ತಿದೆಯಾ

ಎಐಎಡಿಎಂಕೆಯ ಪಾಳುಬಿದ್ದ ಮನೆಯ ಅವಸ್ಥೆ ನೋಡಿ ಜಯಲಲಿತಾ ಆತ್ಮ ಕೊರಗಬಹುದು. ಈ ಮಧ್ಯೆ ಮುಳುಗುತ್ತಿರುವ ಪನ್ನೀರ್ ಬಣದ ಸದಸ್ಯರು  ರಜನಿಕಾಂತ್ ಪಕ್ಷವೆಂಬ ಹುಲ್ಲುಕಡ್ಡಿಯ ಆಸರೆ ಪಡೆದು ರಾಜಕೀಯ ಜೀವನದಲ್ಲಿ ಸ್ಥಾನಮಾನ ಗಳಿಸುತ್ತಾರಾ ಇಲ್ಲವೇ ಡಿಎಂಕೆ ಬಣದ ಜತೆ ಮುಂದಿನ ಚುನಾವಣೆಯಲ್ಲಿ ಕೈಜೋಡಿಸಿ ಡಿಎಂಕೆಗೆ ಅನುಕೂಲ ಕಲ್ಪಿಸುತ್ತಾರಾ ಕಾದುನೋಡಬೇಕು.Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery