ಲೋಕಾಯುಕ್ತದಲ್ಲಿ ಭ್ರಷ್ಟಾಚಾರ: ಬೇಲಿಯೇ ಎದ್ದು ಹೊಲ ಮೇಯಿತೇ?
ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ನಾನಾ ಅಭಿಯಾನಗಳನ್ನು ಹಮ್ಮಿಕೊಂಡು ಭ್ರಷ್ಟಾಚಾರ ನಿರ್ಮೂಲನೆಗೆ ಟೊಂಕ ಕಟ್ಟಿ ನಿಂತರು. ಆದರೆ ಕೊನೆಗೆ ಏನಾಯಿತು? ಲೋಕಪಾಲ ಮಸೂದೆ ಇನ್ನೂ ಲೋಕಸಭೆಯಲ್ಲಿ ಧೂಳು ತಿನ್ನುತ್ತಾ ಕೂತಿದೆ. ಹೋಗಲಿ ವಿವಿಧ ರಾಜ್ಯಗಳು ಸ್ಥಾಪಿಸಿದ ಲೋಕಾಯುಕ್ತಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿರಬಹುದು  ಎಂದು ಭಾವಿಸಬೇಡಿ.
 
ಅಲ್ಲಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೆಲವು ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ಮಾಡಿ ಒಂದಷ್ಟು ದಾಖಲೆಗಳನ್ನು ವಶಪಡಿಸಿಕೊಂಡು ಕೇಸು ಜಡಿಯುವ ಸುದ್ದಿ ಪತ್ರಿಕೆಗಳಲ್ಲಿ ಬರುತ್ತವೆ. ನಂತರ ಆ ಅಧಿಕಾರಿಗಳು ಏನಾದರು ಎಂದು ಹುಡುಕುತ್ತಾ ಹೋದರೆ ಅವರು ಬಡ್ತಿ ಪಡೆದು ಇನ್ನೊಂದು ಹುದ್ದೆಯಲ್ಲಿ ಮಜಾ ಮಾಡುತ್ತಾ ಕಾಲಕಳೆಯುವುದು ಕಂಡುಬರುತ್ತದೆ.
 
ಅದರೆ ಲೋಕಾಯುಕ್ತಕ್ಕೆ ಕೇಸು ದಾಖಲಿಸಬಹುದೇ ಹೊರತು ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಅಂದರೆ ಸರ್ಕಾರಗಳು ಭ್ರಷ್ಟಾಚಾರದ ಗಂಭೀರತೆಯನ್ನು ಅರ್ಥ ಮಾಡಿಕೊಂಡಿಲ್ಲ ಎನ್ನುವ ಅಂಶ ಸ್ಪಷ್ಟವಾಗಿದೆ. ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳನ್ನು ಶಿಕ್ಷಿಸುತ್ತಾ ಹೋದರೆ ತಮ್ಮ ಬುಡಕ್ಕೆ ಕೊಡಲಿಪೆಟ್ಟು ಬೀಳಬಹುದೆಂಬ ಭಯ ಸರ್ಕಾರಗಳಿಗೆ ಇರಬಹುದೇ?

ಆದರೆ ಲೋಕಾಯುಕ್ತದಲ್ಲೇ ಭ್ರಷ್ಟರಿದ್ದರೆ ಸರ್ಕಾರಿ ಅಧಿಕಾರಿಗಳನ್ನು  ಹಿಡಿಯುವವರು ಯಾರೂ ಇಲ್ಲದ ಹಾಗಾಗುತ್ತದೆ. ಅವರು ಆಡಿದ್ದೇ ಆಟವಾಗುತ್ತದೆ. ಸಂತೋಷ್ ಹೆಗ್ಡೆಯವರಂಥ ಪ್ರಾಮಾಣಿಕರನ್ನು ಕಂಡ ಕರ್ನಾಟಕ ಲೋಕಾಯುಕ್ತವು ಈಗ ಬೇಲಿಯೇ ಎದ್ದು ಹೊಲ ಮೇದ ಪ್ರಕರಣದಲ್ಲಿ ಸಿಲುಕಿದೆ. ಪೊಲೀಸರು ಇರುವುದು ಕಳ್ಳರನ್ನು ಅಪರಾಧಿಗಳನ್ನು ಹಿಡಿದು ಜನಸಾಮಾನ್ಯರ ರಕ್ಷಣೆ ಮಾಡುವುದಕ್ಕೆ. ಆದರೆ ಪೊಲೀಸರೇ ಕಳ್ಳರ, ಅಪರಾಧಿಗಳ ಜತೆ ಷಾಮೀಲಾದರೆ ಜನಸಾಮಾನ್ಯರ ಪಾಡೇನು? ಈಗ ಆಗಿರುವುದು ಅದೇ ಸ್ಥಿತಿ.
 
ಭ್ರಷ್ಟ ಅಧಿಕಾರಿಗಳನ್ನು ಹಿಡಿದು ಅವರ ವಿರುದ್ಧ ಕೇಸು ಜಡಿಯಬೇಕಿದ್ದ ಲೋಕಾಯುಕ್ತ ಕಚೇರಿಯೇ  ಅಧಿಕಾರಿಗಳಿಂದ ಲಂಚ ಸ್ವೀಕರಿಸಿ ಅವರನ್ನು ರಕ್ಷಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಪುತ್ರರೇ  ಅಧಿಕಾರಿಗಳಿಗೆ ದಾಳಿಯ ಬೆದರಿಕೆಯೊಡ್ಡಿ ಲಂಚ ಸ್ವೀಕರಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಭಾಸ್ಕರರಾವ್ ಕೂಡ ಇದರಲ್ಲಿ ಶಾಮೀಲಾಗಿರಬಹುದು ಎಂಬ ಶಂಕೆಯಿಂದ ಅವರ ರಾಜೀನಾಮೆಗೆ ನಾನಾ ಪಕ್ಷಗಳು ಸಂಘಟನೆಗಳು ಒತ್ತಾಯಿಸಿವೆ. ಅಧಿಕಾರಿಗಳು ಲಂಚ ನೀಡುವುದಕ್ಕೆ ಕಾರಣವೇನು? ತಾವು ಹಿಂದೆ ಪಡೆದಿದ್ದಳ ಲಂಚ, ರುಷುವತ್ತಿನ ಸ್ವಲ್ಪ ಭಾಗವನ್ನು ಕಕ್ಕಿ ಸುಸೂತ್ರವಾಗಿ ತಮ್ಮ ವ್ಯವಹಾರ ನಡೆಸುವುದು.
 
ತಮಗಿದ್ದ  ಲೋಕಾಯುಕ್ತವೆಂಬ ಕಂಟಕ ನಿವಾರಣೆಯಾದ ಬಳಿಕ ಹೇಳುವವರು, ಕೇಳುವವರು ಯಾರೂ ಇಲ್ಲದೇ ರಾಜಾರೋಷವಾಗಿ ಕಾಯಕ ಮುಂದುವರಿಸಬಹುದು.ಆದರೆ ಸರ್ಕಾರ ಇಂತಹ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಹುನ್ನಾರವೇಕೆ, ಅವರಿಗೂ ಇವರಿಗೂ ಇರುವ ಒಳಒಪ್ಪಂದವೇನು? ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೇ ರಕ್ಷಿಸುತ್ತಿರುವುದರಿಂದಲೇ ಭ್ರಷ್ಟಾಚಾರ ರಾಜ್ಯಸರ್ಕಾರಗಳಲ್ಲಿ ಅವ್ಯಾಹತವಾಗಿ ಸಾಗಿದೆ.
 
ಅಂದ ಮೇಲೆ ಸರ್ಕಾರ ಭ್ರಷ್ಟಾಚಾರವನ್ನು ಕಾರ್ಯಾಂಗದ ಅವಿಭಾಜ್ಯ ಅಂಗವೆಂದು ಭಾವಿಸಿದೆಯೇ. ಭ್ರಷ್ಟಚಾರ ನಡೆಯದಿದ್ದರೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಭಾವಿಸಿದೆಯೇ? ಲೋಕಾಯುಕ್ತರ ಪುತ್ರನಿಗೆ ಲಂಚ ನೀಡಿದ ಅಧಿಕಾರಿಗಳ ಹೆಸರನ್ನು ತನಿಖಾ ಸಂಸ್ಥೆ ಬಹಿರಂಗ ಮಾಡಿದ ಕೂಡಲೇ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆಯೇ, ಏಕೆಂದರೆ ಲಂಚ ನೀಡುವುದು ಕೂಡ ಅಪರಾಧವಾದ್ದರಿಂದ ಅವರನ್ನು ಶಿಕ್ಷಿಸಲೇಬೇಕಾಗುತ್ತದೆ. ಆದರೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಇವೆಲ್ಲಾ ಸಾಧ್ಯವೇ ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡುತ್ತದೆ. Post Comments
Name
Email
subject
Comment
 
 

Advertisement

 
School Bangalore
 
SareeBangalore
 
find parlour
 

Gallery

 
bollywood
 
Tollywood
 
sandalwood
 
kollywood
 
 
 
 

Video Gallery